ಎಸೆಸೆಲ್ಸಿ ಮೌಲ್ಯಮಾಪನಕ್ಕೆ ಹಾಜರಾಗದ ನಿಯೋಜಿತ ಶಿಕ್ಷಕರ ಮೇಲೆ ಶಿಸ್ತು ಕ್ರಮ: ಡಿಡಿಪಿಐ ಎಚ್ಚರಿಕೆ

Update: 2017-04-19 12:00 GMT

ತುಮಕೂರು, ಎ.19: ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಹಾಜರಾಗದ ನಿಯೋಜಿತ ಶಿಕ್ಷಕರ ಮೇಲೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಡಿಡಿಪಿಐ ಕೆ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವು ಎ.20ರಿಂದ ನಡೆಯಲಿದ್ದು, ನಿಯೋಜಿತ ಜಂಟಿ ಮುಖ್ಯ ಪರೀಕ್ಷಕರು, ಪರೀಕ್ಷಕರು, ಉಪಮುಖ್ಯ ಪರೀಕ್ಷಕರು, ಸಹಾಯಕ ಪರೀಕ್ಷಕರು ಹಾಗೂ ಶಿಕ್ಷಕರು ಮೌಲ್ಯ ಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರಿಗೆ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುವುದು. ಗುರುತಿನ ಚೀಟಿ ನೀಡಲು ಅನುವಾಗುವಂತೆ ಶಿಕ್ಷಕರು ಮೌಲ್ಯ ಮಾಪನ ಕೇಂದ್ರಕ್ಕೆ ಆಗಮಿಸುವಾಗ ತಮ್ಮ ಸ್ಟಾಂಪ್ ಸೈಝ್ ಭಾವಚಿತ್ರವನ್ನು ತರತಕ್ಕದ್ದು ಹಾಗೂ ಕಾರ್ಯಾದೇಶದಲ್ಲಿ ಬ್ಯಾಂಕ್ ಖಾತೆಯ ವಿವರಗಳು ಇಲ್ಲದಿದ್ದಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕ ಮುಖಪುಟದ ಜೆರಾಕ್ಸ್ ಪ್ರತಿಯನ್ನು ಒದಗಿಸಬೇಕು. ಮೌಲ್ಯಮಾಪನ ಕೇಂದ್ರದ ಒಳಗೆ ಮೊಬೈಲ್ ಫೋನ್ ಬಳಕೆ ಹಾಗೂ ಜನಪ್ರತಿನಿಧಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದರು.

ಮೌಲ್ಯ ಮಾಪನ ಸಮಯದಲ್ಲಿ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದು, ಈ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿ ಹಾಗೂ ಸ್ಟೆನ್ಸಿಲ್ ಯಂತ್ರಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News