×
Ad

​ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಕಲ ಕ್ರಮ: ಜಿಲ್ಲಾಧಿಕಾರಿ ಬಿ.ರಾಮು

Update: 2017-04-19 20:04 IST

ಚಾಮರಾಜನಗರ, ಎ.19: ಜಿಲ್ಲೆಯಲ್ಲಿ ಬರಪರಿಸ್ಥಿತಿಯು ಗಂಭೀರ ಸ್ವರೂಪವನ್ನು ಪಡೆದಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಅಭಾವ ಉಂಟಾಗದಂತೆ ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 18 ಗೋಶಾಲೆ ಹಾಗೂ 20 ಮೇವು ನಿಧಿಗಳನ್ನು ತೆರೆಯಲಾಗಿದೆ. ಎಲ್ಲಾ ಹೋಬಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಆದೇಶಿಸಲಾಗಿದೆ. ವಾರಕ್ಕೊಮ್ಮೆ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಜಾನುವಾರುಗಳಿಗೆ ಮೇವು ಒದಗಿಸಲು ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ರಾಮಾಪುರ, ಬಂಡಳ್ಳಿ, ಕೌದಳ್ಳಿ, ದಂಟಳ್ಳಿ, ಶೆಟ್ಟಹಳ್ಳಿ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ ಇನ್ನಿತರ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಪ್ರತಿ ದಿನ ಮೇವನ್ನು ಸರಬರಾಜು ಮಾಡಲಾಗುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ರತಿ ಗೋಶಾಲೆಯಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಅಗತ್ಯ ಔಷಧಿಗಳು, ಲಸಿಕೆ ನೀಡಲಾಗುತ್ತಿದೆ.  ಆಕಸ್ಮಿಕವಾಗಿ ಜಾನುವಾರುಗಳು ಮರಣ ಹೊಂದಿದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಗ್ರಾಮದ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಪರಿಶೀಲನೆಯೊಂದಿಗೆ ಜಾನುವಾರುಗಳ ಪಾಲನೆಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ ಚಾಮರಾಜನಗರ ತಾಲ್ಲೂಕಿನಲ್ಲಿ 2 ಗೋಶಾಲೆ 5 ಮೇವು ಬ್ಯಾಂಕ್, ಕೊಳ್ಳೇಗಾಲ ತಾಲ್ಲೂಕಿನಲ್ಲಿ 14 ಗೋಶಾಲೆ ಮತ್ತು 4 ಮೇವು ಬ್ಯಾಂಕ್, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 2 ಗೋಶಾಲೆ ಹಾಗೂ 10 ಮೇವು ಬ್ಯಾಂಕ್‌ಗಳನ್ನು ಹಾಗೂ ಯಳಂದೂರು ತಾಲ್ಲೂಕಿನಲ್ಲಿ 1 ಮೇವು ನಿಧಿಯನ್ನು ಪ್ರಾರಂಭಿಸಲಾಗಿರುತ್ತದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿಯೇ ತೆರೆಯಲಾಗಿರುವ 14 ಗೋಶಾಲೆಗಳಲ್ಲಿ 21766 ಜಾನುವಾರುಗಳಿಗೆ ಮೇವನ್ನು ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಗೋಶಾಲೆ ಮತ್ತು ಮೇವು ನಿಧಿ ನಿರ್ವಹಣೆಗೆ ಇದುವರೆಗೆ 5.70 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದುವರೆಗೆ 7,554 ಟನ್ ಮೇವನ್ನು ಖರೀದಿಸಿದ್ದು, 7,128 ಟನ್ ಮೇವು ವೆಚ್ಚವಾಗಿರುತ್ತದೆ. ಜೂನ್ ಮಾಹೆಯವರೆವಿಗೂ ಅವಶ್ಯವಿರುವ 14025 ಮೆಟ್ರಿಕ್ ಟನ್ ಮೇವನ್ನು ಖರೀದಿಸಲು ಕ್ರಿಯಾಯೋಜನೆ ತಯಾರಿಸಿ ಕ್ರಮವಹಿಸಲಾಗುತ್ತಿದೆ. ಹೊರ ಜಿಲ್ಲೆಗಳಾದ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಜಿಲ್ಲೆಯಿಂದ ಮೇವನ್ನು ಖರೀದಿಸುತ್ತಿದ್ದು, ಸ್ಥಳೀಯವಾಗಿಯೂ ರೈತರ ಮನವೊಲಿಸಿ ಮೇವನ್ನು ಖರೀದಿಸಿ ಗೋಶಾಲೆ ಹಾಗೂ ಮೇವುನಿಧಿಗಳನ್ನು ನಿರ್ವಹಿಸಲಾಗುತ್ತಿದೆ. ಜೊತೆಗೆ ಕತ್ತರಿಸಿದ ಮೇವನ್ನು (ಚಾಪಡ್ ಫಾಡರ್) ಮೇವು ನಿಧಿಯಲ್ಲಿ ವಿತರಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಪ್ರತಿ ವಾರ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ಕರೆದು ಬರಪರಿಸ್ಥಿತಿ ನಿರ್ವಹಣೆ ಬಗ್ಗೆ ಸುಧೀರ್ಘವಾಗಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ತುರ್ತು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡುವ ಸಂಬಂಧ ಹೆಚ್ಚು ಒತ್ತು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ತಾಪಂಗಳಲ್ಲಿ ಸಹಾಯವಾಣಿ (ಚಾಮರಾಜನಗರ-08226-225392, ಗುಂಡ್ಲುಪೇಟೆ - 08229-222233, ಕೊಳ್ಳೇಗಾಲ-08224-252011, ಯಳಂದೂರು- 08226-240232) ಗಳನ್ನು ತೆರೆಯಲಾಗಿದ್ದು, ದೂರುಗಳು ಸ್ವೀಕೃತಿಯಾದ 24 ಗಂಟೆಯೊಳಗಾಗಿ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಎಲ್ಲ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News