ಬಿಜೆಪಿಯಲ್ಲಿ ಚುರುಕುಗೊಂಡ ಭಿನ್ನಮತೀಯ ಚಟುವಟಿಕೆ
ತುಮಕೂರು, ಎ.19:ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬೆನ್ನಲ್ಲೇ ಪಕ್ಷದಲ್ಲಿನ ಭಿನ್ನಮತೀಯರ ಚುಟುವಟಿಕೆ ತೀವ್ರಗೊಂಡಿದ್ದು, ಬಿಎಸ್‌ವೈ ನಾಯಕತ್ವದ ವಿರುದ್ಧ ಮತ್ತೆ ಅಪಸ್ವರವೆತ್ತಿರುವ ಕೆ.ಎಸ್.ಈಶ್ವರಪ್ಪ, ಬುಧವಾರ ಮಾಜಿ ಸಚಿವ ಸೊಗಡು ಶಿವಣ್ಣ ರ ಮನೆಗೆ ಭೇಟಿ ನೀಡಿ ರಹಸ್ಯ ಮಾತುಕತೆ ನಡೆಸಿದ್ದಾರೆ.
ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಾಗೂ ಇನ್ನೂ ಕೆಲ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.ಇಷ್ಟು ದಿನ ಕಳೆದರೂ ಕೂಡ ಇನ್ನೂ ಕೆಲ ಜಿಲ್ಲೆಗಳಲ್ಲಿ ಅಧ್ಯಕ್ಷರ ಬದಲಾವಣೆಯಾಗದಿದ್ದಕ್ಕೆ ಮತ್ತೊಮ್ಮೆ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುವ ಬಗ್ಗೆ ಹಾಗೂ ಗುಂಡ್ಲುಪೇಟೆ ,ನಂಜನಗೂಡು ಉಪಚುನಾವಣೆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ.
ಇನ್ನೂ ಇದೇ 27 ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದ್ದು,ಇದರಲ್ಲಿ ಬಾಗವಹಿಸುವ ಬಗ್ಗೆ ಇಬ್ಬರು ಚರ್ಚೆ ನಡೆಸಿದ್ದು,ಸಮಾವೇಶ ದಲ್ಲಿ ಬ್ರಿಗೇಡ್‌ನ ಎಲ್ಲರೂ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನೂ ಸಭೆ ಮುಗಿದ ಬಳಿಕ ಈಶ್ವರಪ್ಪ ಯಾವುದೇ ಪ್ರತಿಕ್ರಿಯೆ ನೀಡದೇ,ಮಾಧ್ಯಮದವರ ಕಣ್ಣು ತಪ್ಪಿಸಿ ತೆರಳಿದರೆ,ಕೆಲ ನಾಯಕರು ಮತ್ತೊಮ್ಮೆ ಮಾಜಿ ಸಚಿವ ಸೊಗಡು ಶಿವಣ್ಣ ಅವರೊಂದಿಗೆ ಚರ್ಚೆ ನಡೆಸಿದರು.ಸಭೆಯಲ್ಲಿ ಮಾಜಿ ಸಚಿವ ರವೀಂದ್ರನಾಥ್,ಬಾನುಪ್ರಕಾಶ್,ಸೋಮಣ್ಣ ಬೇವಿನಮರದ,ಸಿದ್ದರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.