×
Ad

ಪ್ರಿನ್ಸ್ ಹುಲಿಯ ದವಡೆ ವಿಧಿ ವಿಜ್ಞಾನ ಪರೀಕ್ಷೆಗೆ ರವಾನೆ

Update: 2017-04-19 20:54 IST

ಗುಂಡ್ಲುಪೇಟೆ, ಎ.19: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಾವಿಗೀಡಾಗಿದ್ದ ಪ್ರಿನ್ಸ್ ಹುಲಿಯ ದವಡೆ ಎಂದು ನಿರೀಕ್ಷಿಸಿರುವ ಭಾಗ ದೊರಕಿದ್ದು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಬಂಡೀಪುರದ ಷಫರ್ಡ್ ಡಾಗ್ ರಾಣಾ ನೆರವಿನಿಂದ ಘಟನಾ ಸ್ಥಳದ ಸುತ್ತಲೂ ಹುಡುಕಾಟ ನಡೆಸಿದಾಗ ಅದರ ಕೆಳ ದವಡೆಯು ಪತ್ತೆಯಾಗಿದೆ. ಇದನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕುಂದಕೆರೆ ವಲಯಾರಣ್ಯಾಧಿಕಾರಿ ಶಿವಾನಂದ ವಿ.ಮಗದುಂ ತಿಳಿಸಿದ್ದಾರೆ.

ಪಿಸಿಸಿಎಫ್ ಭೇಟಿ ಪರಿಶೀಲನೆ: ಬಂಡೀಪುರದಲ್ಲಿ ಪ್ರಿನ್ಸ್ ಹುಲಿಯು ಇತ್ತೀಚೆಗೆ ಸಾವಿಗೀಡಾಗಿದ್ದ ಪ್ರದೇಶಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಂಡೀಪುರದ ಕುಂದಕೆರೆ ವಲಯದಲ್ಲಿ ಪ್ರವಾಸಿಗರಿಗೆ ನಿರಂತರ ದರ್ಶನ ನೀಡುತ್ತಿದ್ದ ಪ್ರಿನ್ಸ್ ಹೆಸರಿನ ಗಂಡು ಹುಲಿ ಸಾವಿಗೀಡಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಎಪಿಸಿಸಿಎಫ್ ರಂಗರಾವ್ ಘಟನೆ ನಡೆದಿದ್ದ ಕುಂದಕೆರೆ ವಲಯದ ಲೊಕ್ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ವನ್ಯಜೀವಿಗಳಿಗೆ ಸೌರವಿದ್ಯುತ್ ಮೋಟಾರು ಅಳವಡಿಸುವ ಮೂಲಕ ಕುಡಿಯುವ ನೀರು ಪೂರೈಕೆ ಹಾಗೂ ಕಂದಕಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಟಿ.ಪೂವಯ್ಯ, ಡಿ.ಎ.ಮರಡಿಮನಿ, ಬಂಡೀಪುರ ವಲಯಾರಣ್ಯಾಧಿಕಾರಿ ಜೆ.ಗೋವಿಂದರಾಜು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News