×
Ad

ಉದ್ಯೋಗದ ಮೀಸಲಾತಿ ಭಿಕ್ಷೆಯಲ್ಲ: ದೇವನೂರು ಪುಟ್ಟನಂಜಯ್ಯ

Update: 2017-04-19 22:20 IST

ಮಂಡ್ಯ, ಎ.19: ಸಂವಿಧಾನ ನೀಡಿರುವ ಉದ್ಯೋಗ ಮೀಸಲಾತಿ ಭಿಕ್ಷೆಯಲ್ಲ. ದೇಶದಲ್ಲಿ ಎಲ್ಲಿಯವರೆಗೆ ಅಸಮಾನತೆ, ಜಾತಿ ಸಮಸ್ಯೆ ಇರುವುದೋ ಅಲ್ಲಿವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ಡಾ.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ನಗರದ ತಾವರೆಗೆಯ ಚಲುವಯ್ಯ ಉದ್ಯಾನವನದಲ್ಲಿ ಎಸ್‌ಡಿಪಿಐ ವತಿಯಿಂದ ಬುಧವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವರಿಗೂ ಶಿಕ್ಷಣ, ಉದ್ಯೋಗ, ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಭಾರತೀಯ ಸಮಾಜದಲ್ಲಿ ಅಸಮಾನತೆ ಇದೆ. ಇದನ್ನು ಮನಗಂಡು ಅಂಬೇಡ್ಕರ್ ಮೀಸಲಾತಿ ಸೌಲಭ್ಯ ಜಾರಿಗೊಳಿಸಿದರು. ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಮೀಸಲಾತಿಯ ಉದ್ದೇಶ. ಆದ್ದರಿಂದ ಮೀಸಲಾತಿ ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲಿ ಸರ್ವರಿಗೂ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ಸಿಕ್ಕಿಲ್ಲ. ಅಂಬೇಡ್ಕರ್ ಕಂಡ ಕನಸು ನನಸಾಗಿಲ್ಲ ಎಂದು ವಿಷಾದಿಸಿದರು.

ಮತದಾರರಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆ ಬೆಳೆಯಬೇಕು. ಮತದ ಮೌಲ್ಯವನ್ನು ಅರಿಯಬೇಕು. ಹಣಕ್ಕೆ ಮತ ಮಾರಿಕೊಳ್ಳುವುದನ್ನು ಬಿಡಬೇಕು. ಮನುವಾದಿಗಳ ಕುತಂತ್ರಕ್ಕೆ ಬಲಿಯಾಗಬಾರದು. ಆಗ ಮಾತ್ರ ಸಾಮಾಜಿಕ ನ್ಯಾಯ ಪರಿಕಲ್ಪನೆ ಸಾಕಾರಗೊಳ್ಳಲಿದೆ ಎಂದು ಅವರು ಹೇಳಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹಿರ್, ವಕೀಲ ಚೀರನಹಳ್ಳಿ ಲಕ್ಷ್ಮಣ್, ಹೋರಾಟಗಾರ ಎಂ.ಬಿ.ನಾಗಣ್ಣಗೌಡ, ರಫೀಕ್, ಮುನವರ್ ಖಾನ್, ಚಲುವರಾಯಪ್ಪ, ಅಸ್ಗರ್, ಶ್ರೀನಿವಾಸ್, ನೂರುಲ್ಲಾ ಷರೀಫ್ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News