‘ಸತ್ಯರಾಜ್ ಮೇಲಿನ ಕೋಪವನ್ನು 'ಬಾಹುಬಲಿ' ಮೇಲೆ ತೋರಿಸಬೇಡಿ’
ಬೆಂಗಳೂರು, ಎ.20: "ಈ ಹಿಂದೆ ಕಾವೇರಿ ವಿವಾದಕ್ಕೆ ಸಂಬಂಧಿಸಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಾಹುಬಲಿ-2ರ ಬಿಡುಗಡೆಗೆ ಅಡ್ಡಿ ಮಾಡಬೇಡಿ. ಸತ್ಯರಾಜ್ ಮೇಲಿನ ಕೋಪವನ್ನು ಸಿನಿಮಾದ ಮೇಲೆ ತೋರಿಸಬೇಡಿ'' ಎಂದು ಬಾಹುಬಲಿ-2ರ ನಿರ್ದೇಶಕ ರಾಜಮೌಳಿ ಕನ್ನಡಿಗರಲ್ಲಿ ವಿನಂತಿಸಿಕೊಂಡಿದ್ದಾರೆ.
ಕನ್ನಡದಲ್ಲೇ ವಿಡಿಯೋ ಸಂದೇಶ ನೀಡಿದ ರಾಜಮೌಳಿ, ‘‘ ಸತ್ಯರಾಜ್ ಸರ್ ಚಿತ್ರದ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಅಲ್ಲ. ಅವರು ನಮ್ಮಂದಿಗೆ ಕೆಲಸ ಮಾಡುತ್ತಿರುವ ಹಲವು ಕಲಾವಿದರಲ್ಲಿ ಒಬ್ಬರು. ಬಾಹುಬಲಿ ಭಾಗ-2 ಚಿತ್ರ ಕರ್ನಾಟಕದಲ್ಲಿ ಯೋಜನೆಯಂತೆಯೇ ಬಿಡುಗಡೆಯಾಗದೇ ಇದ್ದರೆ ಸತ್ಯರಾಜ್‌ಗೆ ಏನೂ ನಷ್ಟವಿಲ್ಲ. ಸತ್ಯರಾಜ್ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಒಂದು ಚಿತ್ರವನ್ನು ಗುರಿ ಮಾಡುವುದು ಸರಿಯಲ್ಲ. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಈ ವಿಷಯದ ಬಗ್ಗೆ ಸತ್ಯರಾಜ್ ಬಳಿ ಮಾತನಾಡಿದ್ದೇನೆ’’ ಎಂದರು.
ಸತ್ಯರಾಜ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಒಂದು ಒಳ್ಳೆಯ ಸಿನಿಮಾ ನೋಡುವುದರಿಂದ ವಂಚಿತರಾಗಬೇಡಿ. ನಮ್ಮ ಸಿನಿಮಾವನ್ನು ವಿವಾದಕ್ಕೆ ಎಳೆದು ತರಬೇಡಿ ಎಂದು ವಿನಂತಿಸುವೆ ಎಂದು ರಾಜಮೌಳಿ ಹೇಳಿದರು.