×
Ad

ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ: ಎಸ್ಪಿ ಅಣ್ಣಾಮಲೈ ಸ್ಪಷ್ಟನೆ

Update: 2017-04-20 17:20 IST

ಚಿಕ್ಕಮಗಳೂರು, ಎ.20: ಉಡುಪಿಯ ಮಲ್ಪೆ ಪೊಲೀಸ್ ಠಾಣೆಯ ಓರ್ವ ಪೇದೆ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ಒಂದು ವಾಟ್ಸ್ಯಾಪ್ ಮತ್ತು ಇತರ ಸಾಮಾಜಿಕ ಜಾಲಾತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಆಡಿಯೋ ಕ್ಲಿಪ್ಪಿಂಗ್ ನಲ್ಲಿರುವ ಒಂದು ಧ್ವನಿಯನ್ನು ತನಗೆ ಹೋಲಿಸಲಾಗುತ್ತಿದ್ದು, ಅದು ತನ್ನ ಧ್ವನಿಯಲ್ಲ ಎಸ್ಪಿ ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆಡಿಯೋ ಕ್ಲಿಪ್‌ನಲ್ಲಿ ಯಾವುದೋ ರಾಜಕಾರಣಿ ಮತ್ತು ಉಡುಪಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೋರ್ವರನ್ನು ನಿಂದಿಸುತ್ತಿರುವುದು ಎಸ್.ಪಿ. ಅಣ್ಣಾಮಲೈ ಎಂದು ಬಿಂಬಿಸಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಧ್ವನಿ ತನ್ನದಲ್ಲ. 13:45 ನಿಮಿಷಗಳ ಆಡಿಯೋ ಕ್ಲಿಪ್ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಪೇದೆ ಮತ್ತು ಮಾಜಿ ಪೊಲೀಸ್ ಶಶಿಧರ್ ವೇಣುಗೋಪಾಲ್ ಮಧ್ಯೆ ನಡೆದಿರುವ ಸಂಭಾಷಣೆಯಾಗಿದೆ. ಇದನ್ನು ಶಶಿಧರ್ ವೇಣುಗೋಪಾಲ್ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಎ.8ರಂದು ಸೌಂಡ್‌ಕ್ಲೂಡ್ ಅಪ್ಲಿಕೇಷನ್ ಮೂಲಕ ಅಪ್‌ಲೋಡ್ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

"ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಿರುವ ಆಡಿಯೋ ಕುರಿತು ನಾನು ಉಡುಪಿ ಪೇದೆಯನ್ನು ವಿಚಾರಿಸಿದ್ದು, ಆಡಿಯೋ ಕ್ಲಿಪಿಂಗ್ ಪೊಲೀಸ್ ಪೇದೆ ಮತ್ತು ಶಶಿಧರ್ ವೇಣುಗೋಪಾಲ್ ಮಧ್ಯೆ ಮೊಬೈಲ್ ಮೂಲಕ ನಡೆದ ಸಂಭಾಷಣೆ ಎಂದು ದೃಢಪಡಿಸಿದ್ದಾರೆ. ನಾನು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಇತರ ನಾಯಕರು ಸಹಕಾರ ನೀಡಿದ್ದಾರೆ. ನಾನು ಅವರೆಲ್ಲರನ್ನೂ ಹೆಚ್ಚಿನ ಗೌರವದಿಂದ ಕಾಣುತ್ತೇನೆ ಮತ್ತು ಅವರೊಂದಿಗಿನ ಉತ್ತಮ ಬಾಂಧವ್ಯವನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

"ಈ ಆಡಿಯೋವನ್ನು ವಾಟ್ಸ್ಯಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುವುದನ್ನು ತಕ್ಷಣದಿಂದ ನಿಲ್ಲಿಸುವಂತೆ ಎಲ್ಲರನ್ನೂ ಕೋರುತ್ತೇನೆ. ನನ್ನ ಹೆಸರನ್ನು ದುರುಪಯೋಗ ಪಡಿಸುವ ಉದ್ದೇಶದೊಂದಿಗೆ ಆಡಿಯೋ ಕ್ಲಿಪ್ ಅನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News