ಕಾರಿನ ಮೇಲೆ ಬಿದ್ದ ಆಲದ ಮರ: ಇಬ್ಬರು ಮೃತ್ಯು
Update: 2017-04-20 19:00 IST
ತುಮಕೂರು, ಎ.20: ಕಾರಿನ ಮೇಲೆ ಆಲದ ಮರ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗೇಟ್ ಬಳಿ ನಡೆದಿದೆ.
ಜಯಸಿಂಹ (30), ಮಾರುತಿ (35) ಎಂಬವರು ಮೃತಪಟ್ಟಿದ್ದು, ಮೃತರು ಪಾವಗಡ ಮೂಲದವರು ಎನ್ನಲಾಗಿದೆ. ಜಯಸಿಂಹ ಪತ್ನಿ ಹಾಗೂ 15 ದಿನಗಳ ಮಗುವಿನೊಂದಿಗೆ ತುಮಕೂರಿನಿಂದ ಗುಬ್ಬಿ ತಾಲ್ಲೂಕಿನ ವರ್ತೇಕಟ್ಟೆ ಗ್ರಾಮದ ಮಾವನ ಮನೆಗೆ ತೆರಳಿದ್ದರು. ವಾಪಸಾಗುತ್ತಿದ್ದ ವೇಳೆ ವಿಶ್ರಾಂತಿಗಾಗಿ ಬೃಹತ್ ಗಾತ್ರದ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿದ್ದು, ಇದ್ದಕ್ಕಿದ್ದಂತೆ ಮರ ಉರುಳಿ ಬಿದ್ದಿದೆ.
ಘಟನೆಯಿಂದ ಮೂವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.