ಬಾಬಾಬುಡನ್‌ಗಿರಿ ವಿವಾದ ಪರಿಹರಿಸಲು ಸಚಿವ ಸಂಪುಟ ಉಪ ಸಮಿತಿ ರಚನೆ: ಜಿ.ಪರಮೇಶ್ವರ್
ಚಿಕ್ಕಮಗಳೂರು, ಎ. 20: ವಿವಾದಿತ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ಗಿರಿ ಸಮಸ್ಯೆ ಇತ್ಯರ್ಥಪಡಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ಶೀಘ್ರವೇ ಸಮಿತಿ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ನ್ಯಾಯಾಲಯ 6 ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಮಿತಿ ಬಾಬಾಬುಡನ್‌ಗಿರಿಗೆ ತೆರಳಿ ನ್ಯಾಯಾಲಯದ ಆದೇಶದ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ತಯಾರಿಸಲಿದೆ. ಪುನಃ ಕ್ಯಾಬಿನೆಟ್‌ನಲ್ಲಿ ಪ್ರಕರಣದ ವರದಿ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಪರಿಹಾರ ಕಂಡುಕೊಳ್ಳಲು ಮುಂದಾಗುವುದಾಗಿ ತಿಳಿಸಿದರು.
ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ. ಇಲ್ಲಿ ಓರ್ವ ಮುಖ್ಯಸ್ಥರ ಅಗತ್ಯತೆ ಇರುವ ಕಾರಣ ಮುಖ್ಯಮಂತ್ರಿ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದ ಅವರು, ಸಂಪುಟ ವಿಸ್ತರಣೆ ಸಂಬಂಧ ತನ್ನ ಸಮ್ಮುಖದಲ್ಲಿ ಯಾರು ಮಾತನಾಡಿಲ್ಲ. ಆದರೆ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಚುನಾವಣೆಯಲ್ಲಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ನಮಗಿಲ್ಲ. ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.
ಎಸ್.ಎಂ. ಕೃಷ್ಣರ ಮೊಮ್ಮಗ ಕಡೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಾವು ಆಂತರಿಕವಾಗಿ ಮಾಡಿಕೊಂಡಿದ್ದೇವೆ. ಆದರೆ ಇದೇ ಅಂತಿಮವಲ್ಲ. ರಾಜ್ಯದಲ್ಲಿ ಹಾಲಿ 124 ಕಾಂಗ್ರೇಸ್ ಶಾಸಕರಿದ್ದಾರೆ. ಇವರೆಲ್ಲರಿಗೂ ಮುಂದಿನ ಚುನಾವಣೆಗೆ ಟಿಕೇಟ್ ಅಂತಿಮಗೊಳಿಸಲು ಹೈಕಮಾಂಡ್‌ನಲ್ಲಿ ತೀರ್ಮಾನವಾಗಬೇಕಿದೆ. ಕ್ಷೇತ್ರದ ಜನರ ಅಭಿಪ್ರಾಯ ತಿಳಿದು ವೀಕ್ಷಕರು ಆ ಅಭಿಪ್ರಾಯ ವನ್ನು ರಾಜ್ಯ ಚುನಾವಣಾ ಸಮಿತಿ ಮುಂದೆ ಇಡುತ್ತಾರೆ. ಆನಂತರ ಆ ಪಟ್ಟಿ ದೆಹಲಿಯ ಸ್ಕ್ರೀನಿಂಗ್ ಕಮಿಟಿಗೆ ತೆರಳುತ್ತದೆ. ಅದಾದ ಬಳಿಕ ಸೋನಿಯಾಗಾಂಧಿಯವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಚುನಾವಣಾ ಸಮಿತಿ ಪಟ್ಟಿಯನ್ನು ಅಂತಿಮಗೊಳಿಸುತ್ತದೆ ಎಂದು ನುಡಿದರು.
"ಕೆಪಿಸಿಸಿ ಅಧ್ಯಕ್ಷರಾಗಿ ನೀವೇ ಮುಂದುವರೆಯುತ್ತೀರಾ" ಎಂಬ ಪತ್ರ ಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಿನ್ನೆ ರಾಜ್ಯದ ಉಸ್ತುವಾರಿ ವಹಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ. ಅವರು ನಮ್ಮ ಹೈಕಮಾಂಡ್ ಪ್ರತಿನಿಧಿ. ಅವರು ಹೇಳಿಕೆ ಕೊಟ್ಟ ಮೇಲೆ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ. ಪಕ್ಷದ ವರಿಷ್ಟರಾದ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರ ನಿರ್ಧಾರಕ್ಕೆ ತಾನು ಬದ್ಧ ಎಂದು ತಿಳಿಸಿದರು.
ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯ್ ಕುಮಾರ್, ಮಾಜಿ ಎಂಎಲ್‌ಸಿ ಎ.ವಿ.ಗಾಯತ್ರಿ ಶಾಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.