×
Ad

ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾದ ಕಾವಾಡಿಗಳ ಮಕ್ಕಳು

Update: 2017-04-20 19:18 IST

ಗುಂಡ್ಲುಪೇಟೆ, ಎ.20: ಸಾಕಾನೆಗಳಿಗೆ ಸಮರ್ಪಕ ನೀರು ದೊರಕುವ ಕಾರಣದಿಂದ ಕಾವಾಡಿಗಳ ಕುಟುಂಬಗಳ ಸಮೇತ 17 ಆನೆಗಳನ್ನು ಮೂಲೆಹೊಳೆ ಸಮೀಪದ ರಾಂಪುರ ಶಿಬಿರಕ್ಕೆ ಸ್ಥಳಾಂತರಗೊಳಿಸಲಾಗಿದ್ದು, ಇದರಿಂದ ಬಂಡೀಪುರದ ಶಾಲೆಗೆ ತೆರಳುತ್ತಿದ್ದ ಕಾವಾಡಿಗಳ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ವಾರ್ಷಿಕ ಕೋಟ್ಯಾಂತರ ರೂ. ವೆಚ್ಚಕ್ಕೆ ಕಾರಣವಾಗಿ ಬಿಳಿಯಾನೆ ಸಾಕಿದಂತಾಗಿದ್ದು, ಇವುಗಳ ನಿರ್ವಹಣೆಗೆ ನೇಮಕವಾಗಿರುವ ಕಾವಾಡಿಗಳ ಕುಟುಂಬಗಳು ಅರಣ್ಯಪಾಲಾಗಿವೆ. 1914ರಲ್ಲಿ ಬಂಡೀಪುರ ಶಿಬಿರದಲ್ಲಿ ಪ್ರಾರಂಭಿಸಲಾಗಿದ್ದ ಸಾಕಾನೆಗಳ ಒಟ್ಟು ಸಂಖ್ಯೆ 20, ಇವುಗಳನ್ನು ನಿರ್ವಹಿಸಲು 24 ಕಾವಾಡಿಗಳು, 3 ಮಾವುತರು ಹಾಗೂ ಕುಟುಂಬಗಳು ಬಂಡೀಪುರದಲ್ಲಿ ನೆಲೆಸಿದ್ದರು.

ರಾಜ್ಯ ಸರಕಾರ ಶಾಲೆಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆ ಹೋಗದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ನಡೆಸುತ್ತಿದ್ದರೆ, ಅರಣ್ಯ ಇಲಾಖೆ ಮಾತ್ರ ನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳನ್ನು ಅರಣ್ಯಪಾಲು ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಅರಣ್ಯದೊಳಗೆ ನೆಲೆಸಿರುವ ಮೂಲನಿವಾಸಿಗಳನ್ನು ಹೊರಗೆ ಕಳಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಇಲ್ಲಿ ಹೊರಗಿನಿಂದಲೇ ಜನರನ್ನು ಅರಣ್ಯದೊಳಗೆ ಕಳುಹಿಸಿದಂತಾಗಿರುವುದು ವಿಪರ್ಯಾಸ.

ದುಬಾರಿ ನಿರ್ವಹಣೆ: ಬಂಡೀಪುರ ಹಾಗೂ ರಾಂಪುರ ಶಿಬಿರಗಳಲ್ಲಿ ಒಟ್ಟು 21 ಆನೆಗಳಿದ್ದು, ಇವುಗಳ ನಿರ್ವಹಣೆಗೆ ತಲಾ ಒಬ್ಬರು ಮಾವುತ ಹಾಗೂ ಕಾವಾಡಿಗಳಿದ್ದಾರೆ. ಪ್ರತಿ ವರ್ಷ ಆನೆಗಳಿಗೆ ಪೌಷ್ಟಿಕ ಆಹಾರ ವಿತರಣೆಗಾಗಿ 10 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ವ್ಯಯಿಸಲಾಗುತ್ತಿದೆ. ಶಿವಮೊಗ್ಗದ ಸಕ್ರೆಬೈಲು ಹಾಗೂ ದುಬಾರೆ ಶಿಬಿರಗಳಂತೆ ಆನೆಗಳ ಮೇಲೆ ಕುಳಿತು ಗಸ್ತು ನಡೆಸುತ್ತಿಲ್ಲ. ಅಲ್ಲದೆ ಈ ಆನೆಗಳಿಗೆ ಯಾವುದೇ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಹಾಗೂ ಹುಲಿ ಸೆರೆಹಿಡಿಯುವ ಬಗ್ಗೆ ಯಾವುದೇ ತರಬೇತಿ ನೀಡದೆ ಕೇವಲ ಗಸ್ತು ಮಾಡಿಸಲಾಗುತ್ತಿದೆ.

ಸದ್ಯ ಸಾಕಾನೆಗಳನ್ನು ಸ್ಥಳಾಂತರಿಸಿರುವ ಶಿಬಿರ ಹೆದ್ದಾರಿಯಿಂದ 8 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ಇಲಾಖೆಯ ವಾಹನಗಳನ್ನು ಹೊರತುಪಡಿಸಿ ಬೇರಾವುದೇ ವಾಹನ ಸೌಲಭ್ಯವಿಲ್ಲದಿರುವುದರಿಂದ ಸಿಬ್ಬಂದಿ ನಡೆದುಕೊಂಡೇ ಹೋಗಬೇಕಾಗಿದೆ. ಮಳೆಗಾಲದಲ್ಲಿ ಮೂಲೆಹೊಳೆ ತುಂಬಿ ಹರಿಯುತ್ತಿದ್ದು, ಬೇಸಿಗೆಯಲ್ಲಿ ಬತ್ತಿಹೋಗುತ್ತದೆ. ಈ ಹೊಳೆಯ ದಡದಲ್ಲಿ ಗುಡಿಸಲು ಕಟ್ಟಿಕೊಂಡು ಕಾಡುಪ್ರಾಣಿಗಳು ಕುಡಿಯುವ ನೀರನ್ನೇ ಕಾವಾಡಿಗಳ ಕುಟುಂಬದವರು ಕುಡಿಯುತ್ತಿದ್ದಾರೆ.

ಅಸುರಕ್ಷಿತ ಶಿಬಿರ: ಕಾವಾಡಿ ಕುಟುಂಬಗಳಿಗೆ ಕನಿಷ್ಠ ವಸತಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುತ್ತಿಲ್ಲ. ಆನೆಗಳಿಗೆ ಮುದ್ದೆ ಹಾಗೂ ಹುರುಳಿಯನ್ನು ಬಯಲಿನಲ್ಲೇ ಬೇಯಿಸಿ ಕೊಡಬೇಕಾಗಿದೆ. ರಾತ್ರಿ ವೇಳೆ ಮರಕ್ಕೆ ಕಟ್ಟಿರುವ ಸಾಕಾನೆಗಳ ಮೇಲೆ ಕಾಡಾನೆಗಳು ದಾಳಿ ನಡೆಸುತ್ತವೆ. ಮರಿಯಾನೆಗಳ ಮೇಲೆ ಹುಲಿ ಹಾಗೂ ಚಿರತೆಗಳು ದಾಳಿ ನಡೆಸಿದ ಘಟನೆಗಳೂ ನಡೆದಿವೆ. ಆದರೂ ಶಿಬಿರದ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾತ್ರಿ ವೇಳೆ ಕಾವಾಡಿಗಳು ಹೊರಬರಲಾಗುವುದಿಲ್ಲ. ಅಲ್ಲದೆ ಸಣ್ಣಪುಟ್ಟ ಅನಾರೋಗ್ಯಕ್ಕೂ ಪಟ್ಟಣದ ಆಸ್ಪತ್ರೆಗೆ ತೆರಳಬೇಕಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಮಾತ್ರ ತಮ್ಮ ಕುಟುಂಬದೊಡನೆ ಮೈಸೂರಿನಲ್ಲಿ ನೆಲೆಸಿ ತಮ್ಮ ಮಕ್ಕಳಿಗೆ ಪ್ರತಿಷ್ಟಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಬಹುದು. ಆದರೆ ಬಡ ಕಾವಾಡಿಗಳು ಕನಿಷ್ಠ ಸೌಕರ್ಯವೂ ಇಲ್ಲದ ಕಾಡಿನೊಳಗೆ ನೆಲೆಸುವಂತೆ ಮಾಡಿರುವುದು ಯಾವ ನ್ಯಾಯ?

-ಹೆಸರು ಹೇಳಲಿಚ್ಚಿಸದ ಕಾವಾಡಿ

ಒಂದೆಡೆ ಕಾಡಿನೊಳಗಿದ್ದ ಜನರನ್ನು ನಗರಕ್ಕೆ ಸ್ಥಳಾಂತರಿಸಲಾಗುತ್ತಿದ್ದರೆ, ನಾಡಿನಲ್ಲಿದ್ದ ಕಾವಾಡಿಗಳನ್ನು ಕಾಡಿನೊಳಗೆ ಸ್ಥಳಾಂತರಿಸುವ ವ್ಯವಸ್ಥೆ ನಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಮೂಲಭೂತ ಸೌಕರ್ಯಗಳನ್ನು ಕಸಿದುಕೊಳ್ಳುತ್ತಿರುವ ಅರಣ್ಯ ಇಲಾಖೆಯವರು ಕಾವಾಡಿಗಳ ಬದುಕಿನ ಜೊತೆಗೆ ಆಟವಾಡುವುದನ್ನು ಬಿಟ್ಟು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ.

-ಆರ್.ರಘುರಾಂ, ಹಿಮಗಿರಿ ವನ್ಯಜೀವಿ ಸಂರಕ್ಷಣಾ ಸಂಸ್ಥೆ, ಗುಂಡ್ಲುಪೇಟೆ

ಇಲಾಖೆಯ ನಿಯಮದಂತೆ ಶಿಬಿರದ ಆನೆಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಆದರೆ ಯಾವುದೇ ಕಾರ್ಯಾಚರಣೆಯಲ್ಲಿಯೂ ಭಾಗವಹಿಸಿಲ್ಲ. ಶಿಬಿರದ ಸಿಬ್ಬಂದಿಯ ಮಕ್ಕಳಿಗೆ ಶಿಕ್ಷಣ ನೀಡಲು ಶಿಕ್ಷಕರನ್ನು ನೇಮಕ ಮಾಡುವ ಹಾಗೂ ಇಲಾಖೆಯ ವಾಹನದಲ್ಲೇ ಕರೆದೊಯ್ಯುವ ಬಗ್ಗೆ ಯೋಜನೆ ಹಾಕಲಾಗಿದೆ.
-ಟಿ.ಹೀರಾಲಾಲ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News