5,484ಕೋಟಿ ರೂ.ಬಂಡವಾಳ ಹೂಡಿಕೆಯ 2 ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಬೆಂಗಳೂರು, ಎ. 20: ರಾಜ್ಯದಲ್ಲಿ 3400 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ 5,484.90 ಕೋಟಿ ರೂ.ಬಂಡವಾಳ ಹೂಡಿಕೆಯ 2ಹೊಸ ಯೋಜನೆಗಳು ಹಾಗೂ 1 ವಿಸ್ತರಣಾ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ.
ಗುರುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, 2300 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ 4,795.90 ಕೋಟಿ ರೂ. ಹೂಡಿಕೆಯ ಬೆಂಗಳೂರಿನ ಪೂರ್ವ ತಾಲೂಕಿನ ದೊಡ್ಡಕನ್ನಳ್ಳಿ ಗ್ರಾಮದ 73 ಎಕರೆ ಪ್ರದೇಶದಲ್ಲಿ ಜಿ.ಎಂ.ಇನ್‌ಫಿನೈಟ್ ಡ್ವೆಲ್ಲಿಂಗ್ ಇಂಡಿಯಾ ಪ್ರೈ.ಲಿ. ಕಂಪೆನಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.
ಇಂಟಿಗ್ರೆಟೆಡ್ ಟೌನ್‌ಶಿಪ್ ವಿತ್ ಟೆಕ್ ಪಾರ್ಕ್, ಶಾಪಿಂಗ್ ಮಾಲ್, ಆಸ್ಪತ್ರೆ, ಇನ್ ಹೌಸ್, ರೆಸಿಡೆನ್‌ಶಿಯಲ್ ಅಪಾರ್ಟ್‌ಮೆಂಟ್, ಕ್ಲಬ್ ಸೇರಿದಂತೆ ಇತರೆ ಚಟುವಟಿಕಗಳು ನಡೆಯಲಿವೆ ಎಂದು ಉನ್ನತ ಮಟ್ಟದ ಸಮಿತಿ ತಿಳಿಸಿದೆ.
ಅದೇ ರೀತಿಯಲ್ಲಿ 1100 ಜನರಿಗೆ ಉದ್ಯೋಗ ಕಲ್ಪಿಸುವ 515 ಕೋಟಿ ರೂ. ಬಂಡವಾಳ ಹೂಡಿಕೆಯ 40 ಎಕರೆ ಪ್ರದೇಶದಲ್ಲಿ ಹಾಸನದಲ್ಲಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಮಂಜುನಾಥ ಎಜುಕೇಶನಲ್ ಫೌಂಡೇಶನ್ ಟ್ರಸ್ಟ್‌ಗೆ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ದೊಡ್ಡನೆಕುಂದಿ ಕೈಗಾರಿಕಾ ಪ್ರದೇಶದಲ್ಲಿ 559.74 ಕೋಟಿ ರೂ.ಗಳ ಸೆಂಚುರಿಯನ್ ಸಾಫ್ಟ್‌ವೇರ್ ಸಲ್ಯೂಷನ್ ಪ್ರೈ.ಲಿ. ಕಂಪೆನಿಯ ವಿಸ್ತರಣಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಮತ್ತು ಹಾಸನದಲ್ಲಿ ಯೋಜನೆಗಳು ಬರಲಿವೆ. ಐಟಿ ಮತ್ತು ಶಿಕ್ಷಣ ಕ್ಷೇತ್ರದ ಯೋಜನೆಗಳಿಗೆ ಅನುಮೋದಿಸಲಾಗಿದೆ.