ನಕಲಿ ಬಿಲ್ ಮಾಡಿ ವಂಚಿಸಿದವರನ್ನು ಬಂಧಿಸಲು ಡಾ.ಜಿ.ಪರಮೇಶ್ವರ್ ಸೂಚನೆ

Update: 2017-04-20 16:52 GMT

ಚಿಕ್ಕಮಗಳೂರು, ಎ.20: ಕಳಪೆ ಕಾಮಗಾರಿ ಹಾಗೂ ನಕಲಿ ಬಿಲ್ ಮಾಡಿ ವಂಚಿಸಿದ ಕಳಸ ಗುತ್ತಿಗೆದಾರ ಪ್ರಭಾಕರ ಭಟ್, ಮೂಡಿಗೆರೆ ಮತ್ತು ತರೀಕರೆ ಎಂಜಿನಿಯರ್ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಎಂಜಿನಿಯರ್ ಮತ್ತು ಗುತ್ತಿಗೆದಾರನ್ನು ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಎಸ್ಪಿ ಕೆ. ಅಣ್ಣಾಮಲೈಯವರಿಗೆ ಸೂಚಿಸಿದರು.

ಗುರುವಾರ ನಗರದ ಜಿಪಂ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ಬರ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂತಹ ಗುತ್ತಿಗೆದಾರರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಯೋಜನೆಯ ಕಾಮಗಾರಿಯನ್ನು ಸರಿಯಾಗಿ ಮಾಡದೆ, ಸಾರ್ವಜನಿಕರ ಹಣ ಲೂಟಿ ಮಾಡಿದ್ದಾನೆ. ಈತನ ಮೇಲೆ 3 ಕಡೆ ಎಫ್‌ಐಆರ್ ದಾಖಲಾದರೂ ಕೂಡ ಯಾಕೆ ಬಂಧಿಸಿಲ್ಲ, ದಾಖಲೆಗಳನ್ನು ಸಂಗ್ರಹಿಸಿ ಆತನನ್ನು ಬಂಧಿಸಿ ಎಂದು ತಿಳಿಸಿದರು.

ಜಿಲ್ಲೆಯೂ ಮಳೆಯ ಅಭಾವದಿಂದ ಸತತ ನಾಲ್ಕನೇ ವರ್ಷ ಬರಕ್ಕೆ ತುತ್ತಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳ ಮಳೆಯ ಸಮಗ್ರ ವಿವರವನ್ನು ಸಂಗ್ರಹಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕರಾದ ಸೀತಾರವರಿಗೆ ತಿಳಿಸಿದರು. ಇದರಿಂದ ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ ಹಾಗೂ ಮಳೆಯ ಪ್ರಮಾಣ ಕಡಿಮೆಯಾದರೆ ಏನು ಕ್ರಮಕೈಗೊಳ್ಳಬೇಕು ಎನ್ನುವ ಚಿತ್ರಣ ದೊರೆಯುತ್ತದೆ. ಆದ್ದರಿಂದ ನಾಲ್ಕೈದು ವರ್ಷದ ಮಳೆಯ ವಿವರವನ್ನು ಸಂಗ್ರಹಿಸುವಂತೆ ತಿಳಿಸಿದರು.

ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಬರುವ ಟ್ಯಾಂಕರ್ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲಕರಿಗೆ ಕಳೆದ ಮೂರು ತಿಂಗಳಿಂದ ಹಣ ನೀಡಿಲ್ಲ. ಈ ವಿಚಾರವನ್ನು ಇಒ ಗಮನಕ್ಕೆ ತಂದರೂ  ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರೀಯಿಸಿದ ಸಿಇಒ, ಗ್ರಾಪಂ ಪಿಡಿಒಗಳ ಬೇಜಬ್ದಾರಿತನದಿಂದ ಇಂತಹ ಘಟನೆ ನಡೆದಿದೆ. ಪಿಡಿಒರವರಿಂದ ಬಿಲ್ ತರಿಸಿಕೊಂಡು ಹಣ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಸಿ.ಟಿ ರವಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಐಯ್ಯನ ಕೆರೆಯಿಂದ 4 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಡಿ.ಪಿ. ಆರ್. ಮಾಡಿಸಿ ಕೆರೆಗೆ ನೀರು ತುಂಬಿಸುವುದರಿಂದ ಒಂದು ಹಂತದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಡಾ.ಜಿ. ಪರಮೇಶ್ವರ್ ಕೆರೆ ತುಂಬಿಸುವ ಕೆಲಸಕ್ಕೆ ಡಿ.ಪಿ.ಆರ್. ಮಾಡಿಸುವ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ, ಚಿಕ್ಕಮಗಳೂರು ನಗರದ 25 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 10 ವಾರ್ಡ್ ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅನೇಕ ಕಡೆ ಪೈಪ್‌ಲೈನ್‌ಗಳು ಹಾಳಾಗಿವೆ ಇವನ್ನೇಲ್ಲ ಸರಿಪಡಿಸಲು ಹಣ ಸಾಕಾಗುತ್ತಿಲ್ಲ ಸುಮಾರು 50 ಲಕ್ಷ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಉಪಾಧ್ಯಕ್ಷ ರಾಮಸ್ವಾಮಿ, ಅರಣ್ಯ ಮತ್ತು ವಿಹಾರಧಾಮಗಳ ಅಧ್ಯಕ್ಷ ಎ.ಎನ್. ಮಹೇಶ್, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಎಂಎಲ್‌ಸಿ ಮೋಟಮ್ಮ, ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಶಾಮಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಹನೀಫ್, ಜಿಲ್ಲಾಧಿಕಾರಿ ಜಿ.ಸತ್ಯವತಿ, ಸಿಇಒ ಡಾ.ಆರ್ ರಾಗಪ್ರೀಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News