ಬರ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ನಡೆಸಲು ಅಧಿಕಾರಿಗಳಿಗೆ ಕಠಿಣ ಸೂಚನೆ: ಡಾ.ಜಿ.ಪರಮೇಶ್ವರ್

Update: 2017-04-20 17:09 GMT

ಚಿಕ್ಕಮಗಳೂರು, ಎ.20: ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಎಲ್ಲಾ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸರ್ಕಾರ ಪರಿಹಾರಕ್ಕೆ ಅಗತ್ಯ ಹಣ ಬಿಡುಗಡೆ ಮಾಡಿದೆ. ಬರ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ಮುಂದುವರೆಸಲು ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಬರಪರಿಹಾರ ಕುರಿತಂತೆ ನಡೆಸಿದ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯದ ಬಹುತೇಕ ಕಡೆ ಕಳೆದ ವರ್ಷ ಮಳೆ ಬೀಳದ ಕಾರಣ ಒಟ್ಟು 176 ತಾಲೂಕುಗಳಲ್ಲಿ 163 ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಿದೆ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಸಕಾಲಿಕ ನೆರವು ದೊರೆಯದಿದ್ದರೂ ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗಿದೆ. 2016-17ನೇ ಸಾಲಿನಲ್ಲಿ 17 ಸಾವಿರ ಕೋಟಿ ಬರದಿಂದಾಗಿ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಹಣಕ್ಕೆ ಬೇಡಿಕೆ ಮುಂದಿರಿಸಲಾಗಿತ್ತು ಎಂದು ಹೇಳಿದರು.

ಆದರೆ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪದ ನಿರ್ವಹಣೆಯ ನಿಯಮದಂತೆ ನಷ್ಟದ ಮೊತ್ತಕ್ಕೆ ಅನುಗುಣವಾಗಿ 5 ಸಾವಿರ ಕೋಟಿ ಹಣ ಕೊಡಬೇಕಾಗಿದ್ದರೂ 1,750 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿತ್ತು. ಅದರಲ್ಲೂ ಪೂರ್ಣ ಹಣ ಬಿಡುಗಡೆ ಮಾಡದೆ ಎರಡು ಕಂತುಗಳಲ್ಲಿ 1,200 ಕೋಟಿ ರೂ.ಗಳನ್ನು ಮಾತ್ರ ಒದಗಿಸಿತ್ತು. ಆದರೆ ಸರ್ಕಾರ ರಾಜ್ಯದ ಬರನಿರ್ವಹಣೆಗೆ ಆದ್ಯತೆ ನೀಡಿ ಕೇಂದ್ರದ ಹಣಕ್ಕಾಗಿ ಕಾಯದೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೇಳಿದಷ್ಟು ಹಣವನ್ನು ಮಂಜೂರು ಮಾಡಿ ಒದಗಿಸಿತ್ತು ಎಂದು ತಿಳಿಸಿದರು.

ಅದರೊಂದಿಗೆ ಜಿಪಂ 4 ಹಂತದ ಕಾರ್ಯಪಡೆಗೆ 8.10 ಕೋಟಿ ಹಣ ಬಂದಿದೆ. ನಗರಾಭಿವೃದ್ಧಿ ಇಲಾಖೆಗೆ 2.52 ಕೊಟಿ ಹಣ ಒದಗಿಸಲಾಗಿದೆ. ಕಂದಾಯ ಇಲಾಖೆಗೆ 9.10 ಕೋಟಿ ಹೀಗೆ ಒಟ್ಟಾರೆ 21.79 ಕೋಟಿ ಒದಗಿಸಲಾಗಿದೆ. ಅದರಲ್ಲಿ 13.13 ಕೋಟಿ ಹಣ ವೆಚ್ಚವಾಗಿದೆ. ಅಂದರೆ ಬರ ಪರಿಗಾರಕ್ಕೆ ಹಣದ ಕೊರತೆ ಇಲ್ಲ ಎಂದು ವಿವರಿಸಿದರು.

ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬರ ನಿರ್ವಹಣೆಗೆ ಹೆಚ್ಚಿನ ಹಣದ ಬೇಡಿಕೆ ಬಂದರೆ ತಕ್ಷಣ ನೀಡಲಾಗುವುದು. ಇಡೀ ರಾಜ್ಯದಲ್ಲಿ ಬರ ನಿರ್ವಹಣೆಗಾಗಿ ಸಚಿವರ 4 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಪ್ರವಾಸದ ಮೂಲಕ ಸ್ಥಿತಿಗತಿ ತಿಳಿದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದರಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ನುಡಿದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ, ಅರಣ್ಯ ವಸತಿ ವಿಹಾರಧಾನದ ಅಧ್ಯಕ್ಷ ಎ.ಎನ್.ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News