ಪಾಲೇಮಾಡಿನಲ್ಲಿ ಡಾ.ಅಂಬೇಡ್ಕರ್ ದಿನಾಚರಣೆ

Update: 2017-04-20 18:18 GMT

ಮಡಿಕೇರಿ, ಎ.20 : ದುರ್ಬಲರು ಹಾಗೂ ದಲಿತರು ಶೈಕ್ಷಣಿಕ ಸಬಲತೆಯ ಮೂಲಕವೇ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಾರಸಂದ್ರ ಮುನಿಯಪ್ಪ ಕರೆ ನೀಡಿದ್ದಾರೆ.

ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪಾಲೇಮಾಡಿನ ಕಾನ್ಶಿರಾಂ ನಗರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ವಂಚಿತರಾದವರನ್ನು ಸಮಾಜ ತುಳಿಯುತ್ತದೆ. ದುರ್ಬಲರ ಹೋರಾಟಗಳನ್ನು ಉಳ್ಳವರು ಹತ್ತಿಕ್ಕುತ್ತಾರೆ. ಇದರಿಂದ ಪಾರಾಗಬೇಕಾದರೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂದು ಮಾರಸಂದ್ರ ಮುನಿಯಪ್ಪ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಹುಜನ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಮೊಣ್ಣಪ್ಪ, ಕಾನ್ಶಿರಾಂ ನಗರದಲ್ಲಿ ಜಾತ್ಯಾತೀತ ಮನೋಭಾವದ ಸರ್ವರು ಒಗ್ಗಟ್ಟಾಗಿ ಡಾ.ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇದೇ ಒಗ್ಗಟ್ಟು ಸ್ಥಳೀಯ ನಿವಾಸಿಗಳ ಬೇಡಿಕೆಗಳ ಹೋರಾಟದಲ್ಲೂ ಮುಂದುವರಿಯಲಿದೆ. ಡಾ.ಅಂಬೇಡ್ಕರ್ ಅವರು ರಚಿಸಿದ ಸಮಾನತೆಯ ಸಂದೇಶದ ಸಂವಿಧಾನದ ಉದ್ದೇಶ ಈಡೇರಬೇಕಾದರೆ ಸಮಾಜದಲ್ಲಿ ತುಳಿಯಲ್ಪಟ್ಟಿರುವ ಮಂದಿಯ ಬೇಡಿಕೆಗಳಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು ಮಾತನಾಡಿ, ಭೂಮಿಯ ಹಕ್ಕಿಗಾಗಿ ನಿವೇಶನ ರಹಿತ ಬಡಜನರ ಹೋರಾಟ ನಿರಂತರವಾಗಿ ನಡೆಯಬೇಕೆಂದರು.

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಂ ಕುಮಾರ್, ಬಹುಜನ ವಿದ್ಯಾರ್ಥಿ ಸಂಘದ ಮುಖಂಡರಾದ ಮೋಹನ್ ಮೌರ್ಯ, ಪ್ರಮುಖರಾದ ಆನಂದ, ರಾಜು, ಮುತ್ತಮ್ಮ, ಷರೀಪ, ಅಪ್ಪಾಜಿ, ವಸಂತ, ಪುಣಿ, ಸತೀಶ ಹಾಸನ, ಶ್ರೀನಿವಾಸ್, ಸುರೇಶ್ ಮತ್ತಿತರ ಪ್ರಮುಖರು ಹಾಜರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಡಾ.ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News