ಜಿಲ್ಲಾ ಉಸ್ತುವಾರಿ ಸಚಿವರ ಎದುರಿನಲ್ಲಿ ಸಮಸ್ಯೆಗಳನ್ನು ತೆರೆದಿಟ್ಟ ಕಾರ್ಯಕರ್ತರು

Update: 2017-04-21 11:26 GMT

ಚಿಕ್ಕಮಗಳೂರು, ಎ.21: ಮುಂಬರುವ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲಲು ಪಕ್ಷದ ಕಾರ್ಯಕರ್ತರು ಯಾವುದೇ ಅಡ್ಡಿ ಆತಂಕಗಳೂ ಇಲ್ಲದಂತೆ ಶ್ರಮಿಸಬೇಕು. ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಎಲ್ಲಾ ಜನರಿಗೂ ತಲುಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

 ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಗ್ಗಟ್ಟಿನಿಂದ ಎಲ್ಲವನ್ನು ಸಾಧಿಸಬಹುದು. ಆದರೆ, ದುರಂತವೆಂದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅದರಿಂದಾಗಿಯೇ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ಎಲ್ಲರೂ ಒಗ್ಗಟ್ಟಿನ ಮೂಲಕ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಬೇಕು ಎಂದು ನುಡಿದರು.

 ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ ಎಪಿಎಲ್ ಪಡಿತರ ಚೀಟಿ, ಸುಸಜ್ಜಿತ ಬಡಾವಣೆಗಳಲ್ಲಿ ವಾಸಿಸುತ್ತಿರುವ ಶ್ರೀಮಂತರಿಗೆ ಬಿಪಿಎಲ್ ಪಡಿತರ ಚೀಟಿ ಕೊಡಿಸಿದ್ದಾರೆ. ಅವರ ಬಂಡವಾಳ ಬಯಲು ಮಾಡಬೇಕು ಎಂದರೆ ಪಡಿತರ ಚೀಟಿದಾರರ ಭಾವಚಿತ್ರವನ್ನು ವಿವರಗಳೊಂದಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಬೇಕು ಎಂದು ಸಲಹೆ ಮಾಡಿದರು.

 ಮಾಜಿ ಎಂಲ್‌ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡರ ಸಲಹೆ ಹಿನ್ನೆಲೆಯಲ್ಲಿ ಬೀಕನಹಳ್ಳಿಯಲ್ಲಿ ರೋಗದಿಂದ ಬಳಲುತ್ತಿರುವ ಮಹಿಳೆಗೆ ಮುಖ್ಯಮಂತ್ರಿಗಳಿಗೆ ಹೇಳಿ ಅವರ ಪರಿಹಾರ ನಿಧಿಯಿಂದ ಚೆಕ್ ಬರೆಸಿದೆ. ಚೆಕ್‌ನ್ನು ತಹಸೀಲ್ದಾರ್‌ರೆ ಮಹಿಳೆಗೆ ಕೊಟ್ಟಿದ್ದಾರೆ. ಅದಾದ ನಂತರ ಎಲ್ಲವನ್ನು ನೀವೇ ಮಾಡಿರುವುದರಿಂದ ನೀವು ಕೊಡಿ ಎಂದ ಹಿನ್ನೆಲೆಯಲ್ಲಿ ನಾನು ಚೆಕ್ ಕೊಟ್ಟೆ. ಅದರ ಬಗ್ಗೆ ಬಿಜೆಪಿಗರು ಟೀಕೆ ಮಾಡಿದ್ದಾರೆ. ಅದಕ್ಕೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದರು.

 ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿದ್ದ ದಿ. ಕಾಂಗ್ರೆಸ್ ರಾಮಣ್ಣನವರ ಕುಟುಂಬಕ್ಕೆ ರೂ. 50ಸಾವಿರ ರೂ.ಗಳ ನೆರವಿನ ಹಸ್ತವನ್ನು ಡಾ.ಜಿ.ಪರಮೇಶ್ವರ್ ವಿತರಿಸಿದರು.

  ಈ ಸಮಯದಲ್ಲಿ ಪಕ್ಷದ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಅಧ್ಯಕ್ಷ ವಹಿಸಿದ್ದರು. ಎಂ.ಎ.ಡಿ.ಬಿ ಅದ್ಯಕ್ಷ ಮೋಹನ್, ಅರಣ್ಯ ವಿಹಾರಧಾಮಗಳ ಅಧ್ಯಕ್ಷ ಎ.ಎನ್. ಮಹೇಶ್, ಶಾಸಕ ಶ್ರೀನಿವಾಸ್, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಹನೀಫ್ , ಕೆ.ಬಿ.ಮಲ್ಲಿಕಾರ್ಜುನ, ಶಾಂತೇಗೌಡ, ಕೆಪಿಸಿಸಿ ಕಾರ್ಯದರ್ಶಿ ಆನಂದ್, ಪ್ರಕಾಶ್, ಎಂ.ಸಿ.ಶಿವಾನಂದ ಸ್ವಾಮಿ, ಬಿ.ಎಂ.ಸಂದೀಪ್, ಮಂಜೇಗೌಡ,ಎಚ್.ಎಸ್.ಪುಟ್ಟಸ್ವಾಮಿ, ಶ್ರೀಧರ್ ಉರಾಳ್, ಕಾರ್ಯಕರ್ತ ಪವನ್, ಸೇವಾದಳ ಅಧ್ಯಕ್ಷ ಕೋಟೆ ಆನಂದ್,ಕಾರ್ಯಕರ್ತ ಸಿಲ್ವರ್‌ಸ್ಟರ್, ರೂಬೆನ್ ಮೋಸೆಸ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News