ಕಂದಕಕ್ಕೆ ಉರುಳಿದ ಟ್ಯಾಂಕರ್ : ಚಾಲಕನಿಗೆ ಗಂಭೀರ ಗಾಯ
ಮೂಡಿಗೆರೆ, ಎ.21: ಮಂಗಳೂರಿನಿಂದ ಭದ್ರಾವತಿ ಕಡೆಗೆ ಚಾರ್ಮಾಡಿ ಘಾಟ್ ಮಾರ್ಗವಾಗಿ 20 ಸಾವಿರ ಲೀಟರ್ ಡಿಸೇಲ್ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಲಾರಿಯು ಚಾಲಕನ ಹತೋಟಿ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.
ಚಾರ್ಮಾಡಿ ಘಾಟಿಯ ಬಿದಿರುತಳ ಬಳಿ ಮಂಗಳೂರು ಮೂಲದ ರವಿ ಜಲಾಲ್ ಎಂಬವರಿಗೆ ಸೇರಿದ (ಕೆ.ಎ.19.ಎ.ಎ.9633) ಇಂಧನದ ಟ್ಯಾಂಕರ್ ಲಾರಿಯು ಚಾಲಕನ ಹತೋಟಿ ತಪ್ಪಿ ಚಾರ್ಮಾಡಿಯ ಬಲಭಾಗದ 200 ಮೀಟರ್ ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ. ಇದರಿಂದ ಚಾಲಕ ಲೋಕೇಶ್ ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಣ್ಯ ಅಧಿಕಾರಿಗಳು ಬಣಕಲ್ ಪೋಲಿಸರಿಗೆ ಮಾಹಿತಿ ತಿಳಿಸಿದ್ದು ರಾತ್ರಿಯೇ ಬಣಕಲ್ ಪೋಲಿಸರು ಸ್ಥಳಕ್ಕೆ ತೆರಳಿ ಚಾಲಕ ಲೋಕೇಶ್‌ನನ್ನು ಅಂಬುಲೆನ್ಸ್ ಮೂಲಕ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಟ್ಯಾಂಕರ್ ಬಿದ್ದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದ್ದು ಡಿಸೇಲ್ ಸೋರುತ್ತಿರುವುದು ಕಂಡು ಬಂದಿದೆ. ತಕ್ಷಣ ಚಿಕ್ಕಮಗಳೂರು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ದೇವರಾಜ್ ನೇತ್ರತ್ವದ ತಂಡ ಚಾರ್ಮಾಡಿ ಘಾಟ್‌ಗೆ ಬಂದು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಬೆಂಕಿ ಹೊತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಉರುಳಿದ ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಡಿಸೇಲ್ ತುಂಬಿಸಿ ಅನಂತರ ಲಾರಿಯನ್ನು ಎತ್ತಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್, ಬಣಕಲ್ ಪ್ರಭಾರಿ ಎಸೈ ಚಂದ್ರೇಗೌಡ, ಎಎಸೈ ಶಶಿ, ರುದ್ರೇಶ್, ಚಾಲಕ ಯೋಗೀಶ್, ಅಗ್ನಿ ಶಾಮಕ ದಳದ ಅದಿಕಾರಿಗಳಾದ ದೇವರಾಜ್, ಹಿರಿಯಣ್ಣ ಗೌಡ, ಎಲ್.ಬಿ.ಬಸವರಾಜ್, ರವಿ, ಕೆ.ಎಸ್.ಕೌಶಿಕ್, ಬಾಲ್‌ಧರ್ಶನ್, ಸತೀಶ್, ಸಿ.ಸಿ.ಲೋಕೇಶ್, ಸಮಾಜ ಸೇವಕರಾದ ಕೆ.ಎಚ್.ಮಹಮ್ಮದ್ ಆರೀಪ್, ಚಾರ್ಮಾಡಿ ಹಸನಬ್ಬ, ವರ್ತಕರ ಸಂಘದ ಕಾರ್ಯಧರ್ಶಿ ವೇಣುಗೋಪಾಲ್ ಪೈ,ಡಿ.ಕೆ.ಜಯಂತ್‌ಗೌಡ ಮತ್ತಿತರರಿದ್ದರು.