×
Ad

ಜಗದೀಶ್ ಶೆಟ್ಟರ್‌ಗೆ ತಿರುಗೇಟು ನೀಡಿದ ಪರಮೇಶ್ವರ್

Update: 2017-04-21 18:52 IST

ಚಿಕ್ಕಮಗಳೂರು, ಎ.21: ಉಪಚುನಾವಣೆಯಲ್ಲಿ ಗೆದ್ದು ಐಸಿಯುನಲ್ಲಿದ ಕಾಂಗ್ರೆಸ್ ಸರ್ಕಾರ ಚೇತರಿಸಿಕೊಂಡಿದೆ ಎಂದು ಹೇಳಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನ ಕರಗಡದಲ್ಲಿ ಮಾಧ್ಯಮದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಜಗದೀಶ್ ಶೆಟ್ಟರ್ ಬಾಯಿಗೆ ಬಂದ ರೀತಿಯಲ್ಲಿ ಮಾತಾನಾಡುವುದು ಸರಿಯಲ್ಲ. 2013 ಕ್ಕಿಂತ ಹಿಂದೆ ಬಿಜೆಪಿ ಸರ್ಕಾರ ಅಡಳಿತವಿದ್ದಾಗ 20 ಉಪ ಚುನಾಣೆಯಲ್ಲಿ 19 ರಲ್ಲಿ ಬಿಜೆಪಿ ಗೆದ್ದಿತ್ತು. ಅವರು ಸಹ ಹಣ ಹಾಗೂ ಹೆಂಡದ ಹೊಳೆ ಹರಿಸಿದ್ದಾರೆ ಅಂತಾ ನಾವು ಹೇಳಬೇಕಾಗುತ್ತದೆ ಎಂದು ಖಾರವಾಗಿ ನುಡಿದರು.

ನಂಜನಗೂಡು ಹಾಗೂ ಗುಂಡ್ಲುಬೇಟೆ ಉಪಚುನಾವಣೆಯ ಪಲಿತಾಂಶ ಮತದಾರರು ನೀಡಿರುವ ತೀರ್ಪು.ಸರ್ಕಾರ ಹಾಗೂ ಸಿಎಂ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಕಾರಣ. ಇನ್ನು ಉಪಚುನಾವಣೆ ಫಲಿತಾಂಶ 2018 ರ ಸೆಮಿಫೈನಲ್ ಎಂದು ಯಡಿಯೂರಪ್ಪ ಹೇಳಿದ್ದರು. ಚುನಾವಣಾ ಪೂರ್ವದಲ್ಲಿ ಹೇಳಿಕೊಂಡಂತೆ ಅವರು ಸೆಮಿ ಫೈನಲ್ ನಲ್ಲಿ ಸೋತಿದಾರೆ. ಸೆಮಿಫೈನಲ್ ನಲ್ಲಿ ಸೋತವರು ಎಲ್ಲಿಗೆ ಹೋಗುತ್ತಾರೆ? ಆದರೂ 150ಸೀಟ್ ಗೆಲ್ಲುವುದಾಗಿ ಜನರನ್ನು ನಂಬಿಸಲು ಹೆಣಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

 ಮುಂದಿನ ಚುನಾವಣೆಯಲ್ಲಿ ಯಾವುದೇ ಸಂದೇಹ ಇಲ್ಲದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ನನಗಿದೆ. ಇನ್ನು ಮಂಡ್ಯದಲ್ಲಿ ಸಿಎಂ ಗೆ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ತೋರಿಸಿದ ಹಿನ್ನೆಲೆ ಸಿಎಂ ಎಸ್ಪಿಯನ್ನು ತರಾಟೆ ತೆಗೆದುಕೊಂಡಿರುವುದನ್ನು ಅವರು ಸಮರ್ಥಿಸಿದರು.

ಕಪ್ಪುಬಾವುಟ ತೋರಿಸಿದ್ದರ ಬದಲಾಗಿ ಕಲ್ಲು ಎಸೆದಿದ್ದರೆ ಏನಾಗುತಿತ್ತು ನೀವೇ ಹೇಳಿ ಎಂದು ಪತ್ರಕರ್ತರಿಗೆ ಪರಮೇಶ್ವರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News