×
Ad

ಸಚಿವೆ ಉಮಾ ಭಾರತಿ ರಾಜೀನಾಮೆ ನೀಡುವ ಅಗತ್ಯವಿಲ್ಲ : ಡಿವಿಎಸ್

Update: 2017-04-21 19:31 IST

ಮಡಿಕೇರಿ ಎ.21:ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಬೇಕಾಗಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲವೆಂದು ಕೇಂದ್ರದ ಸಾಂಖ್ಯಿಕ ಯೋಜನಾ ಖಾತೆ ಸಚಿವರಾದ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.

 ನಗರದ ಸುದರ್ಶನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುವುದಾಗಿ ಸ್ಪಷ್ಟಪಡಿಸಿದರು. ವಿಚಾರಣೆ ಎದುರಿಸಬೇಕೆನ್ನುವ ಕಾರಣಕ್ಕಾಗಿ ಉಮಾಭಾರತಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾನೂನಿಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದ ತೀರ್ಪಿನ ಬಗ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಅಥವಾ ಬೇಡವೆ ಎನ್ನುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ನ್ಯಾಯಾಲಯ ವಿಚಾರಣೆಗಷ್ಟೆ ಆದೇಶ ನೀಡಿದ್ದು, ಆರೋಪ ಸಾಬೀತಾಗುವ ಮೊದಲೆ ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ. ಈ ಬಗ್ಗೆ ಪ್ರಧಾನ ಮಂತ್ರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

 ಬಾಬ್ರಿ ಮಸೀದಿ ಪ್ರಕರಣದಲ್ಲಿ ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪ್ರಕರಣದಲ್ಲಿ ಎಲ್.ಕೆ. ಅಡ್ವಾಣಿ ಅವರು ವಿಚಾರಣೆ ಎದುಕಿಸಬೇಕಾಗಿರುವ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಿಲ್ಲವೆಂದು ಸದಾನಂದಗೌಡ ಸ್ಪಷ್ಟಪಡಿಸಿದರು.

ಬಿಜೆಪಿಗೆ ಹೆಚ್ಚಿನ ಮತ

 ಇತ್ತೀಚೆಗೆ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಈ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚಿನ ಮತ ಪಡೆದಿದೆ. ಕೇವಲ ಒಂದು ವರ್ಷದ ಅವಧಿಯೊಳಗೆ ಸಾರ್ವತ್ರಿಕ ಚುನಾವಣೆ ಬರುವ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರದ ಜನತೆ ಅಭಿವೃದ್ಧಿಯ ದೃಷ್ಟಿಕೋನದಿಂದ ಆಡಳಿತದಲ್ಲಿರುವ ಕಾಂಗ್ರೆಸ್‌ನ್ನು ಗೆಲ್ಲಿಸಿದ್ದಾರೆ ಎಂದು ಸದಾನಂದಗೌಡ ಸಮರ್ಥಿಸಿಕೊಂಡರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಜೊತೆ ಕೈಜೋಡಿಸಿದವರು ವಿನಾಶಕ್ಕೆ ತಲುಪಿರುವ ಅನೇಕ ನಿದರ್ಶನಗಳಿವೆ ಎಂದು ಸದಾನಂದ ಗೌಡ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News