'ಜನಪ್ರತಿನಿಧಿಗಳು ದೊರೆಗಳಲ್ಲ, ಸಮಾಜ ಸೇವಕರು' : ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ, ಏ. 22: 'ನಾವು (ಜನಪ್ರತಿನಿಧಿಗಳು) ದೊರೆಗಳಲ್ಲ. ಸಮಾಜ ಸೇವಕರು. ಈಗ ರಾಜರು, ದೊರೆಗಳ ಆಡಳಿತ ನಡೆಯುತ್ತಿಲ್ಲ. ಜನರ ಆಡಳಿತ ನಡೆಯುತ್ತಿದೆ. ನಾವು ಜನರ ಪ್ರತಿನಿಧಿಗಳಾಗಿದ್ದೆವೆ ಅಷ್ಟೆ...' ಇದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾತುಗಳು. ಶನಿವಾರ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆದ ಕಾಲೇಜ್‌ನ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.
ಅವರು ಭಾಷಣ ಮಾಡುವುದಕ್ಕೂ ಮುನ್ನ ಸಮಾರಂಭದ ನಿರೂಪಣೆ ಮಾಡುವವರು ಸಿಎಂರನ್ನು ಸ್ವಾಗತಿಸುವ ವೇಳೆ, ’ಈ ಹಿಂದೆ ಮೈಸೂರು ಸಂಸ್ಥಾನದ ದೊರೆ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಆರಂಭವಾಗಿದ್ದ ಈ ಕಾಲೇಜು ಈಗ ನಾಡಿನ ದೊರೆ ಸಮ್ಮುಖದಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದು ಹೇಳಿದ್ದರು. ಇದನ್ನು ತಮ್ಮ ಭಾಷಣದಲ್ಲಿ ಸಿಎಂ ಪ್ರಸ್ತಾಪಿಸಿ ಮೇಲಿನಂತೆ ಹೇಳಿದರು. ’ನಾಡಿನ ಮುಖ್ಯಮಂತ್ರಿಯಾಗಿ, ಮೈಸೂರಿನವನಾಗಿ ಮೈಸೂರು ಅರಸರು ಸ್ಥಾಪಿಸಿದ ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸುತ್ತಿರುವುದು ಸಂತಸವುಂಟು ಮಾಡಿದೆ' ಎಂದರು.
ನಿರ್ಲಕ್ಷ್ಯ ಬೇಡ: ಖಾಸಗಿ ಕಾಲೇಜುಗಳಲ್ಲಿ ಓದಿದರೆ ಮಾತ್ರ ತಮ್ಮ ಮಕ್ಕಳು ಬುದ್ದಿವಂತರಾಗುತ್ತಾರೆ, ಹೆಸರು ಸಂಪಾದಿಸುತ್ತಾರೆ ಎನ್ನುವ ಮನೋಭಾವದಿಂದ ಪೋಷಕರು ಹೊರಬರಬೇಕು. ಸರ್ಕಾರಿ ಸ್ವಾಮ್ಯದ ಸಹ್ಯಾದ್ರಿ ಕಾಲೇಜ್‌ನಲ್ಲಿ ಓದಿದವರು ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಹೋರಾಟವನ್ನು ರೂಪಿಸಿದ್ದಾರೆ. ದೊಡ್ಡ ದೊಡ್ಡ ಸ್ಥಾನಮಾನ ಅಲಂಕರಿಸಿದ್ದಾರೆ ಇದನ್ನು ಪೋಷಕರು ಮನಗಾಣಬೇಕು ಎಂದು ಹೇಳಿದರು.
ಪ್ರತಿವರ್ಷ ಸುಮಾರು 25 ಸಾವಿರ ಕೋಟಿ ರೂಗಳನ್ನು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ವ್ಯಯಿಸುತ್ತಿದೆ. ಸರ್ಕಾರಿ ವ್ಯವಸ್ಥೆಯಲ್ಲಿಯೇ ಗುಣಾತ್ಮಕ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಲಾಗಿದೆ ಎಂದರು. ವಿದ್ಯಾರ್ಥಿಗಳು ನಾಡಿನ ಸಂಪತ್ತಾಗಬೇಕು. ಮಾನವೀಯ ಮೌಲ್ಯಗಳಿಂದ ಕೂಡಿದ ಶಿಕ್ಷಣ ಕಲಿಯಬೇಕು. ಅಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪಠ್ಯೇತರ ವಿಚಾರಗಳನ್ನೂ ಸಹಾ ಕಲಿಯಬೇಕು. ಯಾವಾಗ ಶಿಕ್ಷಕರಲ್ಲಿ ದೈವತ್ವವನ್ನು ಕಾಣುತ್ತೇವೆಯೋ ಆಗ ಮಾತ್ರ ಅಂತಹ ಶಿಕ್ಷಕರಿಂದ ಉತ್ತಮ ಜ್ಞಾನ ಪಡೆಯಲು ಸಾಧ್ಯ. ಶಿಕ್ಷಕರು ಸಮಾಜಕ್ಕೆ ಸ್ಪಂದಿಸುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸದ ಅರಿವಿಲ್ಲ. ಗಾಂಧೀಜಿ, ಅಂಬೇಡ್ಕರ್, ಬಸವಣ್ಣರಂತಹ ಮಹಾನ್ ಪುರುಷರ ಬಗ್ಗೆ ಮಾಹಿತಿಯೇ ಇಲ್ಲ. ಇಂತಹವರಿಂದ ಉತ್ತಮ ಭವಿಷ್ಯ ನಿರ್ಮಾಣ ಹೇಗೆ ಸಾಧ್ಯ ಎಂದು ವಿಷಾದ ವ್ಯಕ್ತಪಡಿಸಿದರು.
ಜ್ಞಾನ ಬಿತ್ತುವ ಕೆಲಸವನ್ನು ವಿದ್ಯಾಸಂಸ್ಥೆಗಳು ಮಾಡುತ್ತವೆ. ಆದರೆ ಅದರಿಂದ ಪ್ರತಿಫಲ ಪಡೆಯುವ ಮತ್ತು ಆ ಮೂಲಕ ಸಂಸ್ಥೆಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಪ್ರೊ. ಸಿ.ಎನ್.ಆರ್.ರಾವ್, ಪ್ರೊ.ಯು.ಆರ್.ಅನಂತಮೂರ್ತಿ, ಪ್ರೊ.ಲಂಕೇಶ್, ಶಾಂತವೇರಿ ಗೋಪಾಲಗೌಡ, ಅವರಂತಹ ಮಹಾನ್ ನಾಯಕರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು. ಸಮಾರಂಭದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಎಂಬಿ.ಭಾನುಪ್ರಕಾಶ್, ತರಿಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಮೇಯರ್ ಏಳುಮಲೈ, ಕುವೆಂಪು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜೋಗನ್ ಶಂಕರ್, ಸಹ್ಯಾದ್ರಿ ಕಾಲೇಜ್‌ನ ಪ್ರಾಚಾರ್ಯರಾದ ಪ್ರೊ.ಬಿ.ಸಿ.ಗೌಡರ ಶಿವಣ್ಣನವರ್, ಪ್ರೊ.ಜಿ.ಶಕುಂಲಾ ಉಪಸ್ಥಿತರಿದ್ದರು.