ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆರೋಪ : ಉಪವಾಸ ಸತ್ಯಾಗ್ರಹ ಆರಂಭಿಸಿದ ಪಾಲೇಮಾಡು ನಿವಾಸಿಗಳು

Update: 2017-04-22 14:33 GMT

ಮಡಿಕೇರಿ,ಎ.22 :ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಅಂಬೆೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ರಸ್ತೆಗಳಿಗೆ ಅಳವಡಿಸಿದ್ದ ನಾಮಫಲಕವನ್ನು ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸಿ ಮತ್ತು ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಅಪಮಾನ ಮಾಡಲಾಗಿದೆಯೆಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ದಲಿತ ಸಂಘಟನೆ ಪದಾಧಿಕಾರಿಗಳು ದಿಢೀರ್ ಪ್ರತಿಭಟನೆಗಿಳಿದಿದ್ದು, ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಾಲೆೇಮಾಡಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗಾಗಿ ವಿವಿಧ ರಸ್ತೆಗಳಿಗೆ ಡಾ.ಅಂಬೇಡ್ಕರ್ ಸೇರಿದಂತೆ ಕೆಲವು ಆದರ್ಶ ಪುರುಷರ ಹೆಸರುಗಳನ್ನು ಇರಿಸಲಾಗಿತ್ತು. ಇಂದು ಗ್ರಾ.ಪಂ ಪಿಡಿಒ ಹಾಗೂ ಪೊಲೀಸರು ದಿಢೀರ್ ಆಗಿ ಸ್ಥಳಕ್ಕೆ ಭೇಟಿ ನೀಡಿ ನಾಮಫಲಕಗಳನ್ನು ತೆರವುಗೊಳಿಸಿದರು.

ಈ ಕ್ರಮಕ್ಕೆ ಸ್ಥಳೀಯರು ಹಾಗೂ ದಲಿತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಿಡಿಒ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿಭಟನೆಯಲ್ಲಿ ತೊಡಗಿದರು.

ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ವಿನಾಕಾರಣ ಸ್ಥಳೀಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಬಹುಜನ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳು ನಿರಂತರವಾಗಿ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿವಾದವನ್ನು ಬಗೆಹರಿಸುವಲ್ಲಿಯವರೆಗೆ ಉಪವಾಸ ಮುಷ್ಕರವನ್ನು ಮುಂದುವರೆಸುವುದಾಗಿ ತಿಳಿಸಿದರು.

ಸ್ಥಳದಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News