×
Ad

ಯಡಿಯೂರಪ್ಪ-ಈಶ್ವರಪ್ಪ ಸಂಘರ್ಷ ದೊಡ್ಡ ಸಮಸ್ಯೆಯಲ್ಲ : ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Update: 2017-04-22 21:25 IST

ಮಂಡ್ಯ,ಎ.22:ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಭಿನ್ನಾಭಿಪ್ರಾಯ ದೊಡ್ಡ ಸಮಸ್ಯೆಯಲ್ಲ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಸಣ್ಣಪುಟ್ಟ ಆಂತರಿಕ ಭಿನ್ನಾಭಿಪ್ರಾಯವಿರುವುದು ನಿಜ. ಆದರೆ, ಅದನ್ನು ಸರಿಪಡಿಸಲಾಗುವುದು ಎಂದರು.

ಇಬ್ಬರು ನಾಯಕರ ನಡುವಿನ ಭಿನ್ನಾಬಿಪ್ರಾಯ ಸರಿಪಡಿಸುವ ಪ್ರಯತ್ನ ನಡೆದಿದೆ. ಉಪಚುನಾವಣೆ, ಇತರೆ ಕಾರಣದಿಂದ ಅದಕ್ಕೆ ಹಿನ್ನಡೆಯಾಗಿತ್ತು. ಈಗ ಒಟ್ಟಿಗೆ ಕುಳಿತು ಸರಿಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಭಯದಿಂದ ಕಾಂಗ್ರೆಸ್‌ಗೆ ಮತ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಿಲ್ಲವೆಂಬ ಭಯದಿಂದ ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಸೋತರೂ ಶೇ.5ರಷ್ಟು ಮತದಾನ ಹೆಚ್ಚಳವಾಗಿದೆ. ಸಿದ್ದರಾಮಯ್ಯ ಅವರ ದ್ವೇಷದ ರಾಜಕಾರಣಕ್ಕೆ ಹೆದರಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬದನವಾಳು ಪ್ರಕರಣದಿಂದ ಅಲ್ಲಿನ ಮೇಲ್ವರ್ಗ ಮತ್ತು ಕೆಳವರ್ಗದ ಜನರ ನಡುವಿನ ಸಾಮರಸ್ಯ ಹದಗೆಟ್ಟಿದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಇದುವರೆಗೂ ಯಾವುದೇ ಸರಕಾರಗಳು ಇದನ್ನು ಸರಿಪಡಿಸುವ ಯತ್ನ ಮಾಡಿಲ್ಲ ಎಂದು ಅವರು ದೂರಿದರು.

ರಾಜಕಾರಣ ಬದಿಗಿಟ್ಟು ಬದನವಾಳು ಪ್ರಕರಣದಿಂದ ಆಗಿರುವ ಗಾಯವನ್ನು ಗುಣಪಡಿಸುವ ಜವಾಬ್ಧಾರಿ ಎಲ್ಲಾ ರಾಜಕೀಯ ಪಕ್ಷಗಳ ಮೇಲಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News