‘ಪೊಲೀಸರು ಒಳ್ಳೆಯವರಲ್ಲ, ಹಣವೂ ನನ್ನದಲ್ಲ’ : ಅಜ್ಞಾತ ಸ್ಥಳದಿಂದಲೇ ನಾಗನ ವಿಡಿಯೋ ಬಾಂಬ್!

Update: 2017-04-22 17:06 GMT

ಬೆಂಗಳೂರು, ಎ.22: ನನ್ನ ಮನೆಯಲ್ಲಿ ಸಿಕ್ಕಿದ್ದ ಹಳೆ ನೋಟುಗಳಿಗೂ ನನಗೂ ಸಂಬಂಧವಿಲ್ಲ. ಇವೆಲ್ಲಾ ನಾಲ್ಕು ಐಪಿಎಸ್ ಅಧಿಕಾರಿಗಳ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ಮಂಜುನಾಥ್ ಎಂಬಾತನಿಗೆ ಸೇರಿದ್ದು ಎಂದು ಕೊಲೆಯತ್ನ ಸೇರಿ ಇನ್ನಿತರೆ ಪ್ರಕರಣಗಳ ಪ್ರಮುಖ ರೂವಾರಿ ಎನ್ನಲಾದ ರೌಡಿಶೀಟರ್ ನಾಗರಾಜ್ ಯಾನೆ ಬಾಂಬ್ ನಾಗ ಅಜ್ಞಾತ ಸ್ಥಳದಿಂದಲೇ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾನೆ.

ಶನಿವಾರ ಅಜ್ಞಾತ ಸ್ಥಳದಿಂದಲೇ ವಿಡಿಯೋ ಮೂಲಕ ಮಾತನಾಡಿರುವ ನಾಗರಾಜ್, ನನ್ನ ಮನೆಯ ಮೇಲೆ ನಡೆದ ದಾಳಿಯಲ್ಲಿ ಸಿಕ್ಕಿರುವ 500 ಮತ್ತು 1 ಸಾವಿರ ರೂ. ಮುಖಬೆಲೆಯ 14.80 ಕೋಟಿ ನನ್ನದಲ್ಲ. ಇದೆಲ್ಲಾ ರಾಜ್ಯದ ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ಎನ್ನುವ ಮಂಜುನಾಥ್‌ಗೆ ಸೇರಿದ್ದು, ಇದರ ಹಿಂದೆ ಬಹುದೊಡ್ಡ ಜಾಲ ಇದೆ ಎಂದು ಆಪಾದಿಸಿದ್ದಾರೆ.

ನಾಗನ ವಿಡಿಯೋ ಮಾತುಗಳು: ಎ.14ರಂದು ಶ್ರೀರಾಂಪುರದ ನನ್ನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆಗಾಗಿ ಅಲ್ಲ. ಅವರು ನನ್ನನ್ನು ಎನ್‌ಕೌಂಟರ್ ಮಾಡಲು. ಇದಕ್ಕೆ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಅದು ಅಲ್ಲದೆ, ದಾಳಿ ದಿನದಂತೆ ಪೊಲೀಸರೇ ನಕಲಿ ಬಂದೂಕು ತಂದಿದ್ದರು. ಆದರೆ, ನಾನು ‘ಬೀಸು ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ’ ಎನ್ನುವಂತೆ ತಪ್ಪಿಸಿಕೊಂಡೆ.

ದಾಳಿಯ ದಿನದಂದು ನಾನು ಮನೆಯಲ್ಲಿಯೇ ಇರಲಿಲ್ಲ. ಸುಮ್ಮನೆ ನಾನು ಮಹಡಿ ಮೇಲಿಂದ ಪರಾರಿ ಆಗಿದ್ದೇನೆ ಎಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆ, ಇನ್ನು ನನ್ನ ಕುಟುಂಬಸ್ಥರಿಗೆ ಪೊಲೀಸರು ಬೇಕಾಗಿಯೇ ಹಿಂಸೆ ಕೊಡುತ್ತಿದ್ದಾರೆ.

ಹಳೆ ನೋಟುಗಳ ಬದಲಾವಣೆ ಮಾಡುವ ಬಹುದೊಡ್ಡ ದಂಧೆ ಬೆಂಗಳೂರಿನಲ್ಲಿದ್ದು, ಅದು ಪೊಲೀಸರಿಗೂ ಗೊತ್ತು. ಕ್ರೈಂ ನಡೆಯುತ್ತಿರೋದು ಪೊಲೀಸ್ ಇಲಾಖೆಯಲ್ಲಿಯೇ. ಪೊಲೀಸರು ಹಣಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. ನನ್ನ ಎನ್‌ಕೌಂಟರ್ ಮಾಡೋಕೆ ನಿಂತಿದ್ದರು. ಆದರೆ, ಆ ದಿನ ನಾನು ಮನೆಯಲ್ಲಿ ಇಲ್ಲದೆ ಇದ್ದು, ದೇವರ ದಯೆಯಿಂದ ಪಾರಾಗಿದ್ದೇನೆ.

ನನ್ನ ಮನೆಯಲ್ಲಿ ಸಿಕ್ಕಿರುವ ಹಣ 4 ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು. ಕಪ್ಪುಹಣವನ್ನು ಬದಲಾಯಿಸಿ ಕೊಡುವಂತೆ ನನ್ನ ಬಳಿ ಸಿಎಂ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ಮಂಜುನಾಥ ಕೇಳಿಕೊಂಡಿದ್ದರು. ಆತ, ನಮ್ಮ ಮನೆಗೆ ಬರುವಾಗ ಸಿಸಿಟಿವಿ ಬಂದ್ ಮಾಡುವಂತೆ ಸೂಚಿಸುತ್ತಿದ್ದರು. ಈ ದಂಧೆಯಲ್ಲಿ ಐವರು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ನಾಗರಾಜ್ ದೂರಿದ್ದಾನೆ.

‘ಹಣಕ್ಕಾಗಿ ಪೊಲೀಸರು ಸಾಯುತ್ತಾರೆ-ಸಾಯಿಸುತ್ತಾರೆ’

ಹಣಕ್ಕಾಗಿ ಹೆಣ್ಣೂರು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಎನ್ನುವರು ಉಮೇಶ್ ಎಂಬಾತ ನೀಡಿದ ದೂರಿನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ, ನಾನು ಇಂದಿಗೂ ಹೆಣ್ಣೂರು, ಬಾಣಸವಾಡಿ ಕಡೆ ಹೋಗಿಲ್ಲ. ಬೇಕಾದರೆ, ನನ್ನ ಮೊಬೈಲ್ ನೆಟ್‌ವರ್ಕ್, ಕಾರು ಹೋಗಿರುವ ಮಾಹಿತಿ ಬಹಿರಂಗಗೊಳಿಸಲಿ ಎಂದು ವಿಡಿಯೋ ಮೂಲಕ ನಾಗರಾಜ್ ಗಂಭೀರವಾಗಿ ಆರೋಪಿಸಿದ್ದಾರೆ.

ಇನ್ನು 10 ಕೋಟಿ ರೂಪಾಯಿ ಹಳೆ ನೋಟುಗಳನ್ನು ಬದಲಾವಣೆ ಮಾಡುವಂತೆ ನಾಲ್ಕು ಐಪಿಎಸ್ ಅಧಿಕಾರಿಗಳ ಮಧ್ಯವರ್ತಿಗಳಾದ ಕಿಶೋರ್, ಮಧು, ಉಮೇಶ್, ಇವನ ಅಣ್ಣ ನವೀನ್ ಎಂಬುವರು ನನ್ನನ್ನು ಸಂಪರ್ಕಿಸಿದ್ದರು. ಆಗ ಸಿಸಿಟಿವಿ ಬಂದ್ ಮಾಡುವಂತೆ ಸೂಚಿಸುತ್ತಿದ್ದರು. ಆದರೆ, ಇದೀಗ ಪೊಲೀಸರು ನನ್ನ ಪ್ರಾಣ ತೆಗೆಯಲು ಮುಂದಾಗಿದ್ದಾರೆ ಎಂದು ಆರೋಪಿ ನಾಗರಾಜ್ ಆಪಾದಿಸಿದ್ದಾರೆ.

ದಂಧೆಯಲ್ಲಿ ಐಪಿಎಸ್‌ಗಳು?

‘ನೋಟು ಬದಲಾವಣೆಯಲ್ಲಿ ಐಪಿಎಸ್ ಅಧಿಕಾರಿಗಳಿದ್ದು, ಮುಂದಿನ ವಿಡಿಯೋದಲ್ಲಿ ಅವರ ಹೆಸರುಗಳನ್ನು ಬಹಿರಂಗಗೊಳಿಸುವೆ. ಈಗ ಹೇಳಿದರೆ, ನನ್ನನ್ನು ಸಾಯಿಸುತ್ತಾರೆ. ಅಷ್ಟೊಂದು ಅವರಿಗೆ ಅಧಿಕಾರ ಇದೆ ಎಂದು ಆರೋಪಿ ನಾಗರಾಜ್ ಹೇಳಿದ್ದಾರೆ.

ಬಿಜೆಪಿ ಸಂಸದ, ಕೈ ಶಾಸಕನ ಕೈವಾಡ

ನಾನು ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಸಕ್ರಿಯನಾಗಿದ್ದೇನೆ ಎಂದು ಗುರಿ ಮಾಡಿಕೊಂಡು, ಬಿಜೆಪಿ ಸಂಸದ ಪಿ.ಸಿ.ಮೋಹನ್ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ದಿನೇಶ್‌ಗುಂಡೂರಾವ್ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನಾಗರಾಜ ದೂರಿದ್ದಾರೆ.

ಈ ಹಿಂದೆ ಹಲವು ಬಾರಿ ನನ್ನನ್ನು ರೌಡಿಪಟ್ಟಿಗೆ ಸೇರಿಸಲಾಗಿತ್ತು. ಬಳಿಕ ಹೈಕೋರ್ಟ್‌ನಿಂದಲೇ ತೀರ್ಪು ಪಡೆದು ರೌಡಿಶೀಟರ್ ತೆಗೆದು ಹಾಕಿಸಿದ್ದೆ. ಅಲ್ಲದೆ, 1999ರಲ್ಲಿ 5 ಸಾವಿರ ಮತಗಳಿಂದ ನಾನು ಸೋತಿದ್ದೆ. ಅಂದಿನಿಂದ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಬಾರದೆಂದು ರಾಜಕೀಯವಾಗಿ ನನ್ನನ್ನು ಮುಗಿಸಲು ಪಿ.ಸಿ.ಮೋಹನ್, ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ ಎಂದು ಆರೋಪಿಸಿದರು.

‘ನಾ ಎಲ್ಲಿಯೂ ಹೋಗಿಲ್ಲ’

ನಾನು ಎಲ್ಲಿಯೂ ತಲೆಮರೆಸಿಕೊಂಡು ಹೋಗಿಲ್ಲ. ಬೆಂಗಳೂರಿನಲ್ಲಿಯೇ ಇದ್ದೇನೆ. ಎಲ್ಲವನ್ನೂ ನೋಡುತ್ತಿದ್ದೇನೆ ಎಂದು ನಾಗರಾಜ್ ವಿಡಿಯೋದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News