ಕಳಪೆ ಐಸ್‌ಕ್ರೀಮ್ ತಯಾರಿಕಾ ಘಟಕಕ್ಕೆ ಅಧಿಕಾರಿಗಳ ದಾಳಿ: ಯಂತ್ರೋಪಕರಣ ವಶಕ್ಕೆ

Update: 2017-04-22 17:34 GMT

ಕುಶಾಲನಗರ, ಎ.22: ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯಲ್ಲಿನ ಮನೆಯೊಂದರಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಗಳು ಕಳಪೆ ರೀತಿಯಲ್ಲಿ ಅಕ್ರಮವಾಗಿ ತಯಾರಿಸುತ್ತಿದ್ದ ಕುಲ್ಫಿಐಸ್ ಕ್ರೀಂನ ಘಟಕಕ್ಕೆ ಪಪಂ ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕ ಲಿಂಗರಾಜ್ ನೇತೃತ್ವದ ತಂಡ ದಾಳಿ ನಡೆಸಿ, ಘಟಕದಲ್ಲಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

 ಪಟ್ಟಣದ 7ನೆ ವಾರ್ಡ್‌ನಲ್ಲಿರುವ ಗುಣಶೇಖರ ಎಂಬವರ ಮನೆಯಲ್ಲಿ ರಾಜಸ್ಥಾನ ಮೂಲದ ಯುವಕರು 2 ಸಾವಿರ ರೂ.ಗೆ ಬಾಡಿಗೆ ಮನೆ ಪಡೆದು ಮನೆಯ ಒಳಭಾಗದಲ್ಲಿ ಕಲಬೆರಕೆ ಪದಾರ್ಥಗಳನ್ನು ಉಪಯೋಗಿಸಿ ಐಸ್ ಕ್ರೀಂ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಕೊಳಚೆ ಪ್ರದೇಶ ಹೊಂದಿದ್ದ ಸ್ಥಳದಲ್ಲಿ ಯಂತ್ರಗಳನ್ನು ಬಳಸಿಕೊಂಡು ಮೇವಾಡ್ ಕುಲ್ಫಿ ಐಸ್ ಕ್ರೀಂ ತಯಾರಿಸಿ, ನಾಲ್ಕು ತಳ್ಳುಗಾಡಿಗಳ ಮೂಲಕ ಕುಶಾಲನಗರ ಮತ್ತು ಇತರ ಕಡೆ ಯುವಕರು ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಆರೋಗ್ಯ ನಿರೀಕ್ಷಕ ಲಿಂಗರಾಜ್ ಅವರ ನೇತೃತ್ವದ ತಂಡ ನಾಲ್ಕು ತಳ್ಳು ಗಾಡಿಗಳು, ಯಂತ್ರ, ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ಶ್ರೀಧರ್, ಯಾವುದೇ ಪರವಾನಿಗೆ ಹೊಂದದೆ ಮನೆಯ ಒಳಭಾಗದಲ್ಲಿ ಅಕ್ರಮವಾಗಿ ಐಸ್ ಕ್ರಿಂ ತಯಾರಿಸುತ್ತಿರುವುದಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಐಸ್‌ಕ್ರೀಮ್ ತಯಾರಿಕಾ ಘಟಕಕ್ಕೆ ಸಂಬಂಧಪಟ್ಟ ಯಂತ್ರಗಾಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News