ಸಮುದ್ರ ಸೇರುವ ಮಳೆನೀರಿನ ಸದ್ಬಳಕೆಯ ಬಗ್ಗೆ ಚಿಂತನೆ ಅಗತ್ಯ: ಪ್ರೊ.ಟಿ.ಜಿ. ಸೀತಾರಾಂ

Update: 2017-04-23 14:10 GMT

ದಾವಣಗೆರೆ, ಎ.23: ಮುಂಗಾರಿನಲ್ಲಿ ಬೀಳುವ ಮಳೆ ನೀರಿನ ಶೇ.82ರಷ್ಟು ಪ್ರಮಾಣ ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಟಿ.ಜಿ. ಸೀತಾರಾಂ ಹೇಳಿದರು.

ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸುಮಾರು ಐದು ಸಾವಿರ ಚಿಕ್ಕ, ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ಭಾರತ ಡ್ಯಾಂ ಕಟ್ಟುವಲ್ಲಿ ಚೀನಾ, ಅಮೇರಿಕಾ ಬಿಟ್ಟರೆ ವಿಶ್ವದಲ್ಲಿಯೇ ಮೂರನೆ ರಾಷ್ಟ್ರವಾಗಿದೆ. ಆದರೆ ಮಳೆ ನೀರು ನಿರ್ವಹಣೆಯಲ್ಲಿ ಹಿಂದೆ ಇದ್ದೇವೆ. ಇಂಜಿನಿಯರಿಂಗ್ ಪದವೀಧರ ವಿದ್ಯಾರ್ಥಿಗಳು ಈ ಬಗ್ಗೆ ಚಿಂತನೆ ನಡೆಸಿ ಯೋಜನೆಗಳನ್ನು ರೂಪಿಸಬೇಕೆಂದರು.

ಬೆಂಗಳೂರಿನ ಕುಡಿಯುವ ನೀರಿನ ಬಳಕೆಗಾಗಿ ಕಾವೇರಿಯ 10 ಟಿ.ಎಂ.ಸಿ. ನೀರಿನ ಲಭ್ಯತೆ ಬಗ್ಗೆ ನಾವು ಚಿಂತಿಸಿದಷ್ಟು ನೇತ್ರಾವತಿಯಿಂದ ವ್ಯರ್ಥವಾಗಿ ಸಮುದ್ರ ಸೇರುವ 400 ಟಿ.ಎಂ.ಸಿ ನೀರಿನ ಬಗ್ಗೆ ಗಮನಹರಿಸುತ್ತಿಲ್ಲ. ತಾಂತ್ರಿಕ ಪದವೀಧರರು ಉದ್ಯೋಗವನ್ನು ಅರಸುವುದಷ್ಟೇ ತಮ್ಮ ಧರ್ಮ ಎನ್ನುವುದನ್ನು ಬಿಟ್ಟು ಅನೇಕ ಕಾರ್ಯ ಯೋಜನೆಗಳ ಬಗ್ಗೆ ಚಿಂತಿಸಬೇಕೆಂದರು.

ಬೆಂಗಳೂರಿನ ಶೈಕ್ಷಣಿಕ ವಿಷಯ ಸಂಬಂಧಿತ ಅಧಿಕಾರಿ ಶ್ರೀನಿವಾಸ ರಾಮಾನುಜಂ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ವಹಿಸಿದ್ದರು. ಗೌರವ ಅತಿಥಿಗಳಾಗಿ ಪ್ರಾಂಶುಪಾಲ ಡಾ.ಎಸ್. ಸುಬ್ರಹ್ಮಣ್ಯ ಸ್ವಾಮಿ ಉಪಸ್ಥಿತರಿದ್ದರು. ಡಾ.ಕೆ.ಮುರುಗೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್.ರಕ್ಷಾ ಪ್ರಾರ್ಥಿಸಿದರು. ಡಾ.ಕೆ.ಎಸ್. ಬಸವರಾಜಪ್ಪ ಸ್ವಾಗತಿಸಿದರು. ಪ್ರೊ.ಎಸ್.ಎ.ಗಂಗರಾಜು, ಪ್ರೊ.ಎಂ.ಆಶಾಲತಾ ಅತಿಥಿಗಳ ಪರಿಚಯ ಮಾಡಿದರು. ಎಸ್.ಎಂ. ಚಂದ್ರಶೇಖರ್ ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ಹೆಸರು ಘೋಷಿಸಿದರು. ಡಾ.ಜಿ.ಮಾನವೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News