ಜನರು ಜಾಗೃತರಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಸಿ.ಯತಿರಾಜು ಎಚ್ಚರಿಕೆ

Update: 2017-04-23 14:14 GMT

ತುಮಕೂರು, ಎ.23: ಇದುವರೆಗೆ ಪರಿಸರವನ್ನು ನಾವು ನಿರ್ಲ್ಯಕ್ಷಿಸುತ್ತಾ ಬಂದಿದ್ದೇವೆ. ವಿಪರೀತ ಬಿಸಿಲು, ಭೂಮಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು, ಭೂಕಂಪ, ಪ್ರವಾಹ, ಬರ ಇಂತಹ ಸೂಕ್ಷ್ಮ ವಿಷಯವನ್ನು ಅರಿತು ಜಾಗೃತರಾಗಬೇಕಿದೆ. ಇಲ್ಲದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ತಿಳಿಸಿದ್ದಾರೆ.

ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರು ಆಂದೋಲನದ ಭಾಗವಾಗಿ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪರಿಸರ ಮತ್ತು ಹವಾಮಾನ ಸಾಕ್ಷರತೆ ವಿಷಯ ಕುರಿತು ಹಮ್ಮಿಕೊಂಡಿದ್ದ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ನಮ್ಮ ಅಸಡ್ಡೆ ಮತ್ತು ಕಬಳಿಸುವ ಮನಸ್ಥಿತಿಯಿಂದಾಗಿ ಇದೀಗ ಅಂತರ್ಜಲಕ್ಕೂ ಕನ್ನ ಹಾಕಿದ್ದೇವೆ. ತೆರೆದ ಬಾವಿಗಳು, ಕೊಳವೆ ಬಾವಿಗಳು ಬತ್ತಿ ಹೋಗಿವೆ.ಈ ಪ್ರದೇಶದಲ್ಲಿ ಬೆಳೆಯಬಾರದ ಬೆಳೆಗಳೆಲ್ಲವನ್ನೂ ಬೆಳೆದು ಸೋತಿದ್ದೇವೆ ಎಂದರು.

ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ಯುವಮುನ್ನಡೆಯ ಮಾರ್ಗದರ್ಶಕ ಜ್ಞಾನ ಸಿಂಧೂ ಸ್ವಾಮಿ ನೆರವೇರಿಸಿದರು.

ನಿತ್ಯಜೀವನದಲ್ಲಿ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಪರಿಸರ ದೌರ್ಜನ್ಯವನ್ನು ಕಂಡರೂ ಕಾಣದಂತೆ ಇದ್ದೇವೆ. ಪರಿಸರದ ಬಗೆಗಿನ ಸೂಕ್ಷ್ಮ ಪ್ರಜ್ಞೆಯನ್ನು ಎಚ್ಚರಿಸಿಕೊಳ್ಳಬೇಕಿದೆ. ಪರಿಸರ ಸಂರಕ್ಷಣೆ ಎಂಬುದು ಒಂದು ಆಂದೋಲನವಾಗಿ ರೂಪು ಗೊಳ್ಳಬೇಕು.ಇದು ಸಾಮೂಹಿಕವಾಗಿ ಶುರುವಾಗಬೇಕು.ಇಲ್ಲದೇ ಹೋದರೇ ನಾವು ಅಳಿವಿನಂಚಿಗೆ ಹೋಗಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ವೆಂಕಟಾಚಲಪತಿ, ಸಿಬ್ಬಂದಿ ನಾರಾಯಣ ಸ್ವಾಮಿ, ರಫಿಕ್, ಶಮಾ ಷಾಯಿದ್, ತಿರುಮಲೇಶ್ ಭಾಗವಹಿಸಿದ್ದರು. ಪಂಡಿತ್ ಜವಹರ್,ಸಿ.ಯತಿರಾಜು, ಜ್ಞಾನ ಸಿಂಧೂ ಸ್ವಾಮಿ, ಕಿಶೋರ್, ಮೇಘಶ್ರೀ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News