ಅಂಬೇಡ್ಕರ್ ಭಾವಚಿತ್ರ ಹರಿದ ಪೊಲೀಸರು: ಪಾಲೇಮಾಡು ನಿವಾಸಿಗಳಿಂದ ಅಹೋರಾತ್ರಿ ಪ್ರತಿಭಟನೆ

Update: 2017-04-23 15:16 GMT

ಮಡಿಕೇರಿ, ಎ.23: ಪಾಲೇಮಾಡುವಿನಲ್ಲಿ ಅಂಬೇಡ್ಕರ್ ಜಯಂತಿಗೆ ಅಳವಡಿಸಲಾದ ಬ್ಯಾನರ್ ಹಾಗೂ ನಾಮಫಲಕ ತೆರವುಗೊಳಿಸುವ ಸಂದರ್ಭ ಪೊಲೀಸ್ ಇಲಾಖೆ ನಿವಾಸಿಗಳ ಮೇಲೆ ದೌರ್ಜನ್ಯ ಎಸಗಿದೆ ಹಾಗೂ ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಅವಮಾನ ಮಾಡಿದೆ ಎಂದು ಆರೋಪಿಸಿ ಪಾಲೇಮಾಡು ನಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೊದ್ದೂರು ಗ್ರಾಪಂ ವ್ಯಾಪ್ತಿಯ ಪಾಲೇಮಾಡು ಕಾನ್ಸಿರಾಂ ನಗರದಲ್ಲಿ ಎ.20 ರಂದು ಬಹುಜನ ಕಾರ್ಮಿಕ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ದ್ವಾರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಶುಭಾಶಯ ಬ್ಯಾನರ್‌ಗಳನ್ನು ಹಾಕಲಾಯಿತು. ಗುರುವಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಕ್ಕೆ ಹೋಗುವ ಮುಖ್ಯ ದ್ವಾರದ ಬಳಿ ಒಂದು ರಸ್ತೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹೆಸರಿನ ಬ್ಯಾನರ್ ಅಳವಡಿಸಲಾಗಿತ್ತು. ಪಾಲೇಮಾಡುವಿನಲ್ಲಿ ಎರಡು ಬಣಗಳಿದ್ದು, ಒಂದು ಬಣದವರು ನಗರದಲ್ಲಿ ಗ್ರಾಪಂ ಅನುಮತಿ ಪಡೆಯದೆ ರಸ್ತೆಗಳಿಗೆ ಹೆಸರು ಹಾಗೂ ಬ್ಯಾನರ್‌ಗಳನ್ನು ಹಾಕಿದ್ದಾರೆ ಅದನ್ನು ತೆರವುಗೊಳಿಸುವಂತೆ ಗ್ರಾಪಂಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಗ್ರಾಪಂ ಪಿಡಿಒ ಚೊಂದಕ್ಕಿ ಪೊಲೀಸರ ನೆರವಿನೊಂದಿಗೆ ನಾಮಫಲಕಗಳ ತೆರವಿಗೆ ಮುಂದಾದಾಗ ಬ್ಯಾನರ್ ಅಳವಡಿಸಿದ ಬಣದವರು ಪ್ರತಿರೋಧವೊಡಿದ್ದರು. ಈ ಸಂದರ್ಭ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಮತ್ತು ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಹಾಕಿ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. 

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಚಾಲಕರಾದ ನಿರ್ವಾಣಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಎಸಗಿರುವುದು ದೇಶದ್ರೋಹವಾಗಿದೆ. ಪಾಲೇಮಾಡುವಿನಿಂದ ಮಡಿಕೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಅಮಾಯಕರ ಮೇಲೆ ದೌಜನ್ಯ ಎಸಗಿರುವುದು ಖಂಡನೀಯ. ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಕೆ.ಮೊಣ್ಣಪ್ಪ ಮಾತನಾಡಿ, ಮಹಿಳೆಯರು, ಮಕ್ಕಳು ಎನ್ನದೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರದಿಂದ ನಾಲ್ಕು ಮಂದಿ  ಆಸ್ಪತ್ರೆ ಸೇರಿದ್ದಾರೆ. ಗ್ರಾಪಂ ಬ್ಯಾನರ್ ಹಾಗೂ ನಾಮಫಲಕ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೆ ನಾವು ತೆರವುಗೊಳಿಸುವ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಏಕಾಏಕಿ ಬಂದು ಅಮಾಯಕ ಜನರ ಮೇಲೆ ದೌಜನ್ಯ ಎಸಗಿ ಅಂಬೇಡ್ಕರ್ ಭಾವಚಿತ್ರ ಹರಿದು ಹಾಕಿದ್ದಾರೆ. ನ್ಯಾಯ ದೊರಕುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ, ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಪ್ರಮುಖರಾದ ವಸಂತ್, ಶೈಲಾ ವಸಂತ್, ಭೀಮವಾದ ದಲಿತ ಸಂಘ ಸಮಿತಿಯ ರಾಜು, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್ ಮತ್ತಿತರರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News