ಜೆಡಿಎಸ್‌ಗೆ 113 ಸ್ಥಾನ ಗೆಲ್ಲುವ ಗುರಿ: ಎಚ್.ಡಿ.ಕುಮಾರಸ್ವಾಮಿ

Update: 2017-04-23 17:59 GMT

ನಾಗಮಂಗಲ, ಎ.23: 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 113 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾಲೂಕಿನ ಬೆಳ್ಳೂರು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಮತ್ತು ಸಾರ್ವಜನಿಕರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ನೇತೃತ್ವದ ಸರಕಾರದ ಅಗತ್ಯವಿದ್ದು, ಅದನ್ನು ಪಡೆಯಲು 113 ಸ್ಥಾನ ಗೆಲ್ಲಲಿದ್ದೇವೆ. ಪಕ್ಷದ ಈ ಗುರಿಗೆ ನಾಗಮಂಗಲವೇ ಮುನ್ನುಡಿಯಾಗುತ್ತದೆ. ಈಗಾಗಲೇ ಹೇಳಿರುವಂತೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ 52 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ, ರೈತರ ಆರ್ಥಿಕ ನೀತಿ ಜಾರಿಗೊಳಿಸಲಿದೆ ಎಂದು ಅವರು ನುಡಿದರು.

ಬಂಡಾಯ ಶಾಸಕರ ವಿರುದ್ದ ವಾಗ್ದಾಳಿ:
ಮಂತ್ರಿ ಮಾಡಿ ಎಂದು 6 ತಿಂಗಳು ನಿದ್ದೆ ಮಾಡಲೂ ಬಿಡದೆ ಪೀಡಿಸಿದವರಿಂದ, ತಾಯಾಣೆಯಾಗಿ ನಿಮಗೆ ಎಂದೂ ದ್ರೋಹ ಬಗೆಯಲ್ಲ ಎಂದವರಿಂದ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದವರಿಂದ ಹತ್ತು ವರ್ಷ ನೋವುಂಡಿದ್ದೇನೆ ಎಂದು ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಮ್ಮ ತಾಯಾಣೆ ನಿಮಗೆ ದ್ರೋಹ ಬಗೆಯಲ್ಲ ಎಂದವರನ್ನು ಮಂತ್ರಿ ಮಾಡಿದ್ದೇವೆ. ಈಗ ದ್ರೋಹ ಮಾಡಿರುವ ಇವರಿಗೆ ತಾಯಿಯ ಮೇಲಿನ ನಂಬಿಕೆ ಹೊರಟುಹೋಗಿದ್ದು, ದೇವರ ಮೇಲಿನ ಆಣೆ ಪ್ರಮಾಣಕ್ಕೆ ಕರೆಯುತ್ತಾರೆ. ಧರ್ಮಸ್ಥಳದಲ್ಲಿ ಆಣೆ ಮಾಡಿದ ತಿಂಗಳಲ್ಲೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ ಎಂಬುದನ್ನು ಜಮೀರ್ ಮರೆತಿದ್ದಾರೆಯೇ ಎಂದೂ ಅವರು ಲೇವಡಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ: ಜೆಡಿಎಸ್ ಸೇರ್ಪಡೆಗೊಂಡಿರುವ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಚಲುವರಾಯಸ್ವಾಮಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿ ಸೇರಲು ಅಣಿಯಾಗಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಇದುವರೆಗೂ ನನ್ನ ಮತ್ತು ಸುರೇಶ್‌ಗೌಡರ ನಡುವಿನ ಕಿತ್ತಾಟದಿಂದ ಚಲುವರಾಯಸ್ವಾಮಿ ಗೆಲ್ಲುತ್ತಿದ್ದರು. ಆದರೆ, ಇಂದು ನಾವಿಬ್ಬರೂ ಒಂದಾಗಿರುವುದರಿಂದ ಚಲುವರಾಯಸ್ವಾಮಿ ಸೋಲು ಖಚಿತವೆಂದರು.

ಐಆರ್‌ಎಸ್ ಅಧಿಕಾರಿ ಲಕ್ಷ್ಮಿಅಶ್ವಿನ್‌ಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ನಾರಾಯಣಗೌಡ, ಕೆ.ಟಿ.ಶ್ರೀಕಂಠೇಗೌಡ, ಅಪ್ಜಾಜಿಗೌಡ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಡಾ.ಅನ್ನದಾನಿ, ಎಂ.ಶ್ರೀನಿವಾಸ್, ಜಿ.ಬಿ.ಶಿವಕುಮಾರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಾರುಖ್. ಜಿಪಂ ಸದಸ್ಯ ಶಿವಪ್ರಕಾಶ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News