ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಅಧಿಕಾರಿ ವಿರುದ್ದ ಎಫ್‌ಐಆರ್

Update: 2017-04-23 18:08 GMT

ಶಿವಮೊಗ್ಗ, ಎ.23: ಮಹಿಳಾ ಅಧಿಕಾರಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕರ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ

ಸುರೇಶ್‌ನಾಯ್ಕ ಆರೋಪಿತ ಅಧಿಕಾರಿ ಎಂದು ಗುರುತಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಕಚೇರಿಯೊಂದರ ಮಹಿಳಾ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಯ ವಿರುದ್ದ ಐಪಿಸಿ ಸೆಕ್ಷನ್ 354 (ಎ) (2), 354 (ಎ) (3) ಕಲಂಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪವೇನು?: ಸುರೇಶ್‌ನಾಯ್ಕ ಕಳೆದ ಐದು ತಿಂಗಳಿನಿಂದ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಒಮ್ಮೆ ಕಪಾಳಕ್ಕೆ ಹೊಡೆದಿದ್ದಾರೆ. ಹಲವು ಬಾರಿ ಎಚ್ಚರಿಸಿದ ಹೊರತಾಗಿಯೂ ಅವರ ವರ್ತನೆ ಬದಲಾಗಿರಲಿಲ್ಲ. ಈ ನಡುವೆ ವಿನಾಕಾರಣ ಒಂದೇ ತಿಂಗಳಿನಲ್ಲಿ ತಮಗೆ 4 ಬಾರಿ ನೋಟೀಸ್ ನೀಡಿ ಮಾನಸಿಕವಾಗಿಯೂ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳಾ ಅಧಿಕಾರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸುರೇಶ್‌ನಾಯ್ಕ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಅವರನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಸ್ಥಾನದಿಂದ ಬಿಡುಗಡೆಗೊಳಿಸಿ, ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ. ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಈ ನಡುವೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಸೂಚನೆ ಅನ್ವಯ ಸುರೇಶ್‌ನಾಯ್ಕ ವಿರುದ್ಧ ದುಡಿಯುವ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ದೂರು ದಾಖಲಾಗಿದೆ. ಜಿಪಂ ಉಪ ಕಾರ್ಯದರ್ಶಿ ಮಣಿ ಅವರಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News