ಸಂಘಪರಿವಾರದ ಆದೇಶದಂತೆ ಕೇಸರಿ ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ: ಎ.ಕೆ.ಸುಬ್ಬಯ್ಯ

Update: 2017-04-24 13:02 GMT

ಮಡಿಕೇರಿ, ಎ.24: ಸಂಘ ಪರಿವಾರದ ಆದೇಶ ಮತ್ತು ಕೇಸರೀಕರಣಗೊಂಡಿರುವ ಪೊಲೀಸರಿಂದ ಪಾಲೇಮಾಡಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎ.ಕೆ.ಸುಬ್ಬಯ್ಯ, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳ ಮಾತನ್ನು ಕೇಳಿ ಪೊಲೀಸರು ಪ್ರತಿಭಟನಾನಿರತ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಮೊಬೈಲ್‌ಗಳನ್ನು ಕಸಿದುಕೊಂಡು ನಾಶಮಾಡಿದ್ದು, ಏಕಪಕ್ಷೀಯವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ನಾಮಫಲಕ ಅಳವಡಿಸಿದ್ದು ತಪ್ಪಾಗಿದ್ದರೂ, ಅದನ್ನು ತೆರವುಗೊಳಿಸುವುದಕ್ಕೂ ನೀತಿ ನಿಯಮವಿದೆ. ಗ್ರಾಪಂ ನೋಟಿಸ್ ನೀಡಿದ್ದರೆ, ಸ್ಥಳೀಯ ನಿವಾಸಿಗಳು ಇದನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದರು. ಆದರೆ, ಏಕಾಏಕಿ ಸಂಘಪರಿವಾರದ ಆದೇಶಕ್ಕೆ ಮಣಿದ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಲಾಠಿಚಾರ್ಜ್ ನಡೆಸಿದ ಪೊಲೀಸರನ್ನು ಹಾಗೂ ಈ ವಿವಾದ ಸೃಷ್ಟಿಯಾಗುವುದಕ್ಕೆ ಕಾರಣಕರ್ತರಾದ ಪಿಡಿಒ ಅವರನ್ನು ತಕ್ಷಣ ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯಾದ್ಯಂತ ಪೊಲೀಸರಿಂದ ದೌರ್ಜನ್ಯ ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಕೇಸರಿ ಪೊಲೀಸರು ಈ ಕೃತ್ಯವೆಸಗುತ್ತಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು.

ಸಂಘ ಪರಿವಾರದ ಕಾರ್ಯಕ್ರಮಗಳಿಗೆ ಸೂಕ್ತ ರಕ್ಷಣೆ ನೀಡುವ ಪೊಲೀಸರು ದಲಿತರು ಕಾರ್ಯಕ್ರಮ ನಡೆಸಿದರೆ ದೌರ್ಜನ್ಯ ನಡೆಸುತ್ತಿದ್ದಾರೆ. ಸಂಘ ಪರಿವಾರ ಮತ್ತು ಕೇಸರಿ ಪೊಲೀಸರು ಸರ್ಕಾರದ ವಿರುದ್ಧ ಪಿತೂರಿ ಮಾಡುತ್ತಿದ್ದು, ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್‌ನ ಯಾವುದೇ ನಾಯಕರು ಪಾಲೇಮಾಡಿಗೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಶಾಪವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎ.ಕೆ.ಸುಬ್ಬಯ್ಯ, ಇವರ ಉಸ್ತುವಾರಿಯಲ್ಲಿ ಅಶಾಂತಿ ಅಕ್ರಮಗಳು ಹೆಚ್ಚಾಗಿದೆ ಎಂದು ಆರೋಪಿಸಿದರು. 

ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಎ.ಕೆ. ಸುಬ್ಬಯ್ಯ, ಟಿಪ್ಪು ಸುಲ್ತಾನನನ್ನು ಆರಾಧಿಸುವ ಜನರ ಭಾವನೆಗೆ ಗೌರವ ನೀಡದಿದ್ದಲ್ಲಿ ಟಿಪ್ಪುವನ್ನು ವಿರೋಧಿಸುವ ಮೊಣ್ಣಪ್ಪ ಅವರ ಭಾವನೆಗೂ ಜನರು ಗೌರವ ನೀಡುವುದಿಲ್ಲವೆಂದು ಹೇಳಿದರು. ಮಾತಂಡ ಮೊಣ್ಣಪ್ಪ ಅವರು ಪಾಲೇಮಾಡಿಗೆ ಭೇಟಿ ನೀಡದೆ ಇಲ್ಲಸಲ್ಲದ ಹೇಳಿಕೆ ನೀಡಿರುವುದು ಹೊಣೆಗೇಡಿತನವಾಗಿದೆಯೆಂದು ಟೀಕಿಸಿದರು.

ಕ್ರೀಡಾಂಗಣದ ವಿರುದ್ಧ ಹಸಿರು ನ್ಯಾಯಪೀಠಕ್ಕೆ ಮೊರೆ

ಕ್ರಿಕೆಟ್ ಕ್ರೀಡಾಂಗಣಕ್ಕಾಗಿ 12.50 ಏಕರೆ ಜಾಗವನ್ನು ತಕ್ಷಣ ಮಂಜೂರು ಮಾಡಿದ ಜಿಲ್ಲಾಡಳಿತಕ್ಕೆ ಪಾಲೇಮಾಡಿನಲ್ಲಿ ನೆಲೆಸಿರುವ ಬಡವರಿಗೆ ಹಕ್ಕು ಪತ್ರ ನೀಡಲು ಯಾಕೆ ಸಾಧ್ಯವಾಗಿಲ್ಲವೆಂದು ಅವರು ಪ್ರಶ್ನಿಸಿದರು. ಬಡವರಿಗೆ ನಿವೇಶನದ ಹಕ್ಕುಪತ್ರ ನೀಡದೆ ಕ್ರೀಡಾಂಗಣದ ವಿಷಯವನ್ನು ಪ್ರಸ್ತಾಪಿಸಬಾರದೆಂದ ಸುಬ್ಬಯ್ಯ ಪಾಲೇಮಾಡಿನಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಪರಿಸರ ಸೂಕ್ಷ್ಮ ಪ್ರದೇಶವನ್ನು ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ ಎ.ಕೆ. ಸುಬ್ಬಯ್ಯ, ಇದಕ್ಕೆ ತಡೆ ಕೋರಿ ಹಸಿರು ನ್ಯಾಯ ಪೀಠದಲ್ಲಿ ದೂರು ದಾಖಲಿಸುವುದಾಗಿ ಸುಬ್ಬಯ್ಯ ತಿಳಿಸಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ಪ್ರೇಮ್‌ಕುಮಾರ್ ಮಾತನಾಡಿ, ಜಾತ್ಯಾತೀತ ನೆಲೆಗಟ್ಟಿನ ಜನರಿರುವ ಕಾನ್ಶಿರಾಂ ನಗರದಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಆದರ್ಶ ಪುರುಷರ ನಾಮಫಲಕ ಅಳವಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ನಾಮಫಲಕಗಳನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡದೆ, ಏಕಾಏಕಿ ದಾಳಿ ನಡೆಸಿ ದೌರ್ಜನ್ಯ ಮಾಡಿದ ಗ್ರಾಪಂ ಹಾಗೂ ಪೊಲೀಸರಿಗೆ ಸಂಘ ಪರಿವಾರದ ತಪ್ಪುಗಳು ಅರಿವಿಗೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಪಾಲೇಮಾಡಿನಲ್ಲಿ ಸಂಘ ಪರಿವಾರ ನಿರ್ಮಿಸಿದ್ದ ಗುಡಿಸಲಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಎಸ್‌ಸಿ-ಎಸ್‌ಟಿ ಕಾಯ್ದೆಯನ್ವಯ ಗ್ರಾಪಂ ಪಿಡಿಒ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಬೇಕು. ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕೆಂದು ಪ್ರೇಮ್‌ಕುಮಾರ್ ಒತ್ತಾಯಿಸಿದರು.

ವಕೀಲ ಕೆ.ಆರ್.ವಿದ್ಯಾಧರ್, ಹೊದ್ದೂರು ಗ್ರಾಪಂ ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಹಾಗೂ ಪಾಲೇಮಾಡು ನಿವಾಸಿ ರಾಧಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News