​ಅಸಂಘಟಿತ ಕಾರ್ಮಿಕರಿಗಾಗಿ 20 ಸಾವಿರ ಮನೆಗಳ ನಿರ್ಮಾಣ: ಸಚಿವ ಸಂತೋಷ್ ಲಾಡ್

Update: 2017-04-24 14:47 GMT

ಬಳ್ಳಾರಿ, ಎ.24: ಹಮಾಲರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗಾಗಿ ಬಳ್ಳಾರಿ ಬಳಿಯ ಮುಂಡರಗಿ ಸಮೀಪ 20 ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಶೀಘ್ರದಲ್ಲೆ ಸರಕಾರದಿಂದ ಅನುಮೋದನೆ ದೊರಕಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

ಸೋಮವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 3.55 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 5 ಸಾವಿರ ಮೆ.ಟನ್ ಸಾಮರ್ಥ್ಯದ ನವೀನ ಗೋದಾಮು ಕಟ್ಟಡ, 1.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಬಹುಧಾನ್ಯಗಳ ಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗಾಗಿ ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈಗಾಗಲೇ ಹಸಿರು ನಿಶಾನೆ ಸಿಕ್ಕಿದ್ದು, ಇನ್ನು ಕೆಲದಿನಗಳಲ್ಲಿ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ಮನೆಗಳ ನಿರ್ಮಾಣದಿಂದ ಹಮಾಲರು ಸೇರಿದಂತೆ ಅಸಂಘಟಿತ ಕಾರ್ಮಿಕರ ಕನಸು ನನಸಾಗಲಿದೆ ಎಂದರು.

ಹಮಾಲರು, ದರ್ಜಿಗಳು, ಮೆಕ್ಯಾನಿಕ್‌ಗಳು ಸೇರಿದಂತೆ ಅಸಂಘಟಿತ 15 ಲಕ್ಷ ಕಾರ್ಮಿಕರಿಗೆ ಪಿಎಫ್ ಸೌಲಭ್ಯವನ್ನು ಸರಕಾರ ಕಲ್ಪಿಸಿದೆ. ಪಿಎಫ್ ಸೌಲಭ್ಯ ಕಲ್ಪಿಸಿದವರಿಗೆ ಸ್ಮಾರ್ಟ್‌ಕಾರ್ಡ್ ನೀಡಲಾಗುವುದು. 30 ಲಕ್ಷ ಚಾಲಕರಿಗೆ ವಿಮೆ ಮಾಡಿಸಲಾಗಿದ್ದು, ಅವಘಡಗಳಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ರೂ.ವರೆಗೆ ಪರಿಹಾರ ದೊರಕಲಿದೆ. ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಮೇಲ್ಮನೆ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಗೋದಾಮು ಕಟ್ಟಡ ಹಾಗೂ ಬಹುಧಾನ್ಯಗಳ ಶುದ್ಧೀಕರಣ ಮತ್ತು ವರ್ಗೀಕರಣ ಘಟಕದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಎಪಿಎಂಸಿ ಕಾರ್ಯದರ್ಶಿ ಜಿ.ಖಲೀಲ್‌ಸಾಬ್, ಶಾಸಕ ಈ.ತುಕಾರಾಂ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರಿಮಲ್ಲಪ್ಪ, ಎ.ಮಾನಯ್ಯ, ಮೇಯರ್ ಜಿ. ವೆಂಕಟರಮಣ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಪಂ ಸದಸ್ಯ ಅಲ್ಲಂ ಪ್ರಶಾಂತ, ಮುಂಡರಗಿ ನಾಗರಾಜ, ಉಪನಿರ್ದೇಶಕ ಸಿ.ಎಚ್. ಮೋಹನ್, ಅಖ್ತರ್ ಮುಯುದ್ದೀನ್, ಎಪಿಎಂಸಿ ಅಧ್ಯಕ್ಷ ಸರಗು ನಾಗರಾಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News