​ಅ.2ರ ವೇಳೆ ಚಿಕ್ಕಮಗಳೂರು ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ: ಡಾ.ಆರ್.ರಾಗಪ್ರಿಯ

Update: 2017-04-24 15:06 GMT

ಚಿಕ್ಕಮಗಳೂರು, ಎ.24: ಈ ವರ್ಷದ ಅ.2ರ ವೇಳೆಗೆ ಚಿಕ್ಕಮಗಳೂರನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗುವುದು ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ರಾಗಪ್ರಿಯ ತಿಳಿಸಿದರು.

ನಗರದ ಜಿಪಂ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶೇ.95ರಷ್ಟು ಭಾಗ ಶೌಚಾಲಯ ನಿರ್ಮಾಣ ಕಾರ್ಯ ಮುಗಿದಿದ್ದು, ಕಡೂರು ಮತ್ತು ತರೀಕೆರೆ ಭಾಗಗಳಲ್ಲಿ ಒಂದಷ್ಟು ಶೌಚಾಲಯ ನಿರ್ಮಾಣದ ಕೆಲಸ ಬಾಕಿ ಉಳಿದುಕೊಂಡಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಲಾಖೆಯೊಂದಿಗೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾದ್ಯಂತ ಶೌಚಾಲಯ ಕಟ್ಟಿ ಬಳಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ಬಯಲು ಪ್ರದೇಶದ ತರೀಕೆರೆ ಕಡೂರು ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಿರುವುದರಿಂದ ಶೌಚಾಲಯದ ಬಳಕೆ ಮತ್ತು ಕಟ್ಟುವುದರಲ್ಲಿ ಭಾಗಶಃ ಹಿನ್ನೆಡೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ಮಳೆಯಾದರೆ ಸಮಸ್ಯೆ ಪರಿಹಾರವಾಗಲಿದೆ. ಶೌಚಾಲಯ ಅನುದಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಮತ್ತು ಫಲಾನುಭವಿಯ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲೆಯ ಸಖರಾಯಪಟ್ಟಣ, ಕಳಸ, ಕರಕುಚ್ಚಿ, ಬೇಲೇನಹಳ್ಳಿ ಗ್ರಾಮಗಳಲ್ಲಿ ನಿರ್ವಹಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅಕ್ರಮವೆಸಗಿರುವ ಗುತ್ತಿಗೆದಾರ ಕಳಸದ ಪ್ರಭಾಕರ್‌ ಭಟ್ ಮತ್ತು ಜೆಇಗಳ ಮೇಲೆ ಎಫ್‌ಐಆರ್ ದಾಖಲಿಸಗಿದ್ದು, ಅವರನ್ನು ಶೀಘ್ರದಲ್ಲಿಯೇ ಬಂಧಿಸುವ ಭರವಸೆಯನ್ನು ಪೋಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಚೈತ್ರಶ್ರೀ, ಉಪಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News