ಬಾಗೇಪಲ್ಲಿ: ಆಂಧ್ರ ಸಂಸದರ ಪುತ್ರ, ಬೆಂಬಲಿಗರಿಂದ ಟೋಲ್ ಪ್ಲಾಝಾಗೆ ನುಗ್ಗಿ ದಾಂಧಲೆ

Update: 2017-04-24 15:57 GMT

ಬಾಗೇಪಲ್ಲಿ, ಎ.24: ಟೋಲ್ ಹಣ ಪಾವತಿಸುವ ವಿಚಾರದಲ್ಲಿ ಟೋಲ್ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದ ಆಂಧ್ರಪ್ರದೇಶದ ಹಿಂದೂಪುರ ಸಂಸದ ನಿಮ್ಮಲಕೃಷ್ಣಪ್ಪರ ಪುತ್ರ ಅಂಬರೀಷ್ ಮತ್ತು ಆತನ ಬೆಂಬಲಿಗರು ಟೋಲ್‌ಫ್ಲಾಝಾದ ಬೂತ್‌ನ ಗಾಜುಗಳನ್ನು ಹಾಗೂ ಕಂಪ್ಯೂಟರ್‌ಗಳನ್ನು ಧ್ವಂಸ ಮಾಡಿರುವ ಘಟನೆ ಬಾಗೇಪಲ್ಲಿಯ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಟೋಲ್‌ಫ್ಲಾಝಾದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಹಿಂದೂಪೂರ ಲೋಕಸಭಾ ಕ್ಷೇತ್ರದ ಸಂಸದ ನಿಮ್ಮಲಕೃಷ್ಣಪ್ಪರ ಪುತ್ರ ಅಂಬರೀಷ್ ತನ್ನ ಕುಟುಂಬದೊಂದಿಗೆ ಸ್ವಗ್ರಾಮವಾದ ಗೋರಂಟ್ಲದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ. ರಾ.ಹೆ.7ರ ಟೋಲ್ ಫ್ಲಾಝಾ ಸಿಬ್ಬಂದಿ ಹಣ ಪಾವತಿಸುವಂತೆ ಕೇಳಿದಾಗ, "ನಾನು ಹಿಂದೂಪೂರ ಸಂಸದ ನಿಮ್ಮಲಕೃಷ್ಣಪ್ಪರ ಪುತ್ರ" ಎಂದು ಅಂಬರೀಷ್ ಗದರಿಸಿದ್ದಾಗಿ ಟೋಲ್ ಸಿಬ್ಬಂದಿ ತಿಳಿಸಿದ್ದಾರೆ.

ಸಂಸದರ ಬೋರ್ಡ್ ಇದ್ದ ವಾಹನವನ್ನು ಬಿಡಲಾಗಿದೆ. ಇನ್ನೊಂದು ವಾಹನಕ್ಕೆ 2016ರ ಕಲರ್ ಜೆರಾಕ್ಸ್‌ ಪಾಸ್ ಅಂಟಿಸಿರುವುದರಿಂದ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಕುಪಿತಗೊಂಡ ಅಂಬರೀಷ್ ಟೋಲ್‌ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ 20 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಟೋಲ್‌ಗೇಟ್‌ ಬೂತ್‌ನ ಗಾಜುಗಳು, ಕಂಪ್ಯೂಟರ್‌ಗಳು ಹಾಗೂ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟೋಲ್‌ಗೇಟ್‌ನ ನಿದೇರ್ಶಕ ಉದಯ್‌ಕುಮಾರ್ ಸಿಂಗ್, "ಪದೇ ಪದೇ ಆಂಧ್ರಪ್ರದೇಶದ ಹಿಂದೂಪುರ ಸಂಸದ ನಿಮ್ಮಲಕೃಷ್ಣನವರ ಮಗ ಸೇರಿದಂತೆ ಅವರ ಬೆಂಬಲಿಗರು ಟೋಲ್ ಫ್ಲಾಝಾದ ಆಸ್ತಿ ಪಾಸ್ತಿಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಈ ಹಿಂದೆಯೂ ಸಹ ಸಂಸದರ ಬೆಂಬಲಿಗರು ಏಕಾಏಕಿ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಾಣಾಂತಿಕ ಹಲ್ಲೆ ನಡೆಸಿದ್ದರು. ಈಗ ಅವರ ಮಗ ಅಂಬರೀಷ್ ಹಲ್ಲೆ ಮಾಡಿರುವುದರಿಂದ ನಮ್ಮ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲ್ಲೆ ನಡೆಸಿದ ಸಂಸದರ ಬೆಂಬಲಿಗರ ಮೇಲೆ ಪ್ರಕರಣ ದಾಖಲು ನೀಡಲು ಠಾಣೆಗೆ ತೆರಳಿದರೆ, ಹಲ್ಲೆ ನಡೆಸಿದವರು ಬೇಲ್ ಪಡೆದು ಹೊರಟು ಹೋಗಿದ್ದಾರೆ. ರಾಜಕಾರಣಿಗೆ ಒಂದು ಕಾನೂನು ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಬೇಟಿನೀಡಿ ಪರಿಶೀಲಿಸಿ, ಪೊಲೀಸ್ ವೃತ್ತನಿರೀಕ್ಷಕ ಗೋವಿಂದರಾಜು, ಪೊಲೀಸ್ ಉಪನಿರೀಕ್ಷಕ ಆರ್.ನರೇಶ್‌ನಾಯಕ್ ರವರಿಂದ ಮಾಹಿತಿ ಪಡೆದರು. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News