​ಅನಿಯಮಿತ ವಿದ್ಯುತ್ ಕಡಿತ: ಗ್ರಾಮಸ್ಥರಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ

Update: 2017-04-24 17:50 GMT

ಚಿಕ್ಕಮಗಳೂರು, ಎ.24: ತಮ್ಮ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಕರ್ತಿಕೆರೆ, ಮುಗುಳುವಳ್ಳಿ, ಅಂಬಳೆ, ಕುರುವಂಗಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಗರದ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಕಚೇರಿ ಆರಂಭವಾಗುತ್ತಿದ್ದಂತೆ ಆವರಣದಲ್ಲಿ ಜಮಾಯಿಸಿದ ನೂರಾರು ಗ್ರಾಮಸ್ಥರು ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಕಳೆದ ಒಂದು ತಿಂಗಳಿನಿಂದ ತಮ್ಮ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗದೇ ಹಳ್ಳಿಗಳು ಕತ್ತಲಕೂಪದಂತಾಗಿವೆ, ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದಲಾಗದೇ ಪರದಾಡುವಂತಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಫ್ಯಾನ್ ಇಲ್ಲದೆ ಮನೆ ಒಳಗೆ ಮಲಗದಂತಾಗಿದೆ ಎಂದು ಆರೋಪಿಸಿದರು.

ಸ್ಥಳಕ್ಕಾಗಮಿಸಿದ ಪ್ರಭಾರ ಕಾರ್ಯಪಾಲಕ ಅಭಿಯಂತ ವಿಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಟಭನಾಕಾರರು ಮಲತಾಯಿ ಧೋರಣೆ ಬಿಟ್ಟು ಸಮರ್ಪಕವಾಗಿ ತಮ್ಮ ಗ್ರಾಮಗಳಿಗೆ ವಿದ್ಯುತ್ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ವಿಜಯ್ ಕುಮಾರ್, ಬೇಲೂರಿನ ಫೀಡರ್‌ಗೆ ಇಲ್ಲಿನ ವಿದ್ಯುತ್ ಜೋಡಿಸಿರುವುದರಿಂದ ಓವರ್ ಲೋಡ್‌ನಿಂದಾಗಿ ವಿದ್ಯುತ್ ಆಗಾಗ ಡ್ರಿಪ್ ಆಗುತ್ತಿದ್ದು ಸದ್ಯದಲ್ಲೇ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ತಿಳಿಸಿದರು. ಈ ಉತ್ತರದಿಂದ ತೃಪ್ತರಾಗದ ರೈತರು ತಮ್ಮ ಗ್ರಾಮಗಳಿಗೆ ವಿದ್ಯುತ್ ನೀಡದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಗ್ರಾಮಸ್ಥರೊಂದಿಗೆ ಕಚೇರಿಯಲ್ಲಿ ಸಭೆ ನಡೆಸಿದ ವಿಜಯ್ ಕುಮಾರ್ ಬೇಲೂರಿಗೆ ಹರಿಸುವ ವಿದ್ಯುತ್‌ನ್ನು ಸ್ಥಗಿತಗೊಳಿಸಿ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಮತ್ತು ರಾತ್ರಿ 8:30ರಿಂದ 12 ಗಂಟೆಯವರೆಗೆವಿದ್ಯುತ್ ಒದಗಿಸುವ ರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.

ಕರ್ತಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗಿಶ್, ವಿವಿಧ ಗ್ರಾಮಗಳ ಮುಖಂಡರಾದ ಗುರುಮೂರ್ತಿ, ಸ್ವಾಮಿ, ಜಗದೀಶ್, ಮರಿಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಉಪಾಧ್ಯಕ್ಷ ಕುಮಾರ್ ಆರ್.ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ಅಶೋಕ್, ಭರತ್, ಶರತ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News