ವಿಶ್ವದಲ್ಲಿಯ 10 ಅಗ್ರ ‘ಅಂತರ್ ಧರ್ಮೀಯ’ ನಗರಗಳು

Update: 2017-04-25 10:32 GMT

ಹೊಸದಿಲ್ಲಿ,ಎ.25: ಅಂತರರಾಷ್ಟ್ರೀಯ ಶಾಂತಿಯನ್ನು ಸಾಧಿಸುವಲ್ಲಿ ಧಾರ್ಮಿಕ ಸೌಹಾರ್ದತೆ ಪ್ರಮುಖ ಪಾತ್ರವನ್ನು ಹೊಂದಿದೆ. ಅಲ್ ಅರೇಬಿಯಾ ವೆಬ್‌ಸೈಟ್ ಧಾರ್ಮಿಕ ಸೌಹಾರ್ದತೆಯ ಛಾಪು ಹೊಂದಿರುವ ವಿಶ್ವದ 10 ಮಹಾನಗರಗಳನ್ನು ಆಯ್ಕೆ ಮಾಡಿದೆ.

ಮಸೀದಿಗಳು,ಚರ್ಚ್‌ಗಳು ಮತ್ತು ಮಂದಿರಗಳು ಪಕ್ಕಪಕ್ಕದಲ್ಲಿಯೇ ಇರುವ ನಗರಗಳಿವೆ. ಈ ಸಾಮೀಪ್ಯದಿಂದಾಗಿ ವಿವಿಧ ಧರ್ಮಗಳ ಜನರ ನಡುವೆ ಸಂವಹನ ಸಾಧ್ಯವಾಗುವುದು ಮಾತ್ರವಲ್ಲ, ಆತ್ಮೀಯತೆ ಬೆಳೆಯಲೂ ಅದು ನೆರವಾಗುತ್ತದೆ.

ವಿವಿಧ ಧರ್ಮಗಳ ಆರಾಧನಾ ಸ್ಥಳಗಳು ಒಂದು ಚ.ಕಿ.ಮೀ. ವಿಸ್ತೀರ್ಣಕ್ಕಿಂತ ಕಡಿಮೆ ಪ್ರದೇಶದಲ್ಲಿ ಹೇರಳ ಸಂಖ್ಯೆಯಲ್ಲಿರುವ ವಿಶ್ವದ 10 ನಗರಗಳು ಇಲ್ಲಿವೆ....

►ಬರ್ಲಿನ್

ಅಂತರ್ ಧಾರ್ಮಿಕತೆಗಾಗಿ ಬರ್ಲಿನ್ ಅಗ್ರಸ್ಥಾನದಲ್ಲಿದೆ. ವಿಶ್ವದಲ್ಲಿಯೇ ವಿಶಿಷ್ಟವಾದ ಮೂರು ವಿಭಿನ್ನ ಧರ್ಮಗಳ ಆರಾಧನಾ ತಾಣ ‘ಹೌಸ್ ಆಫ್ ಒನ್ ’ನ್ನು 2017ರಲ್ಲಿ ಪೂರ್ಣಗೊಳಿಸಲು ನಗರಾಡಳಿತವು ಶ್ರಮಿಸುತ್ತಿದೆ.

‘ಹೌಸ್ ಆಫ್ ಒನ್ ’ ಒಂದೇ ಛಾವಣಿಯಡಿ ಮುಸ್ಲಿಮರಿಗಾಗಿ ಮಸೀದಿ, ಕ್ರೈಸ್ತರಿಗಾಗಿ ಚರ್ಚ್ ಮತ್ತು ಯಹೂದ್ಯರಿಗಾಗಿ ಸೈನಾಗಾಗ್ ಹೊಂದಿರಲಿದೆ. ಈ ಮೂರು ಪ್ರತ್ಯೇಕ ವಿಭಾಗಗಳಿಗೆ ಕಟ್ಟಡದ ನಡುವೆ ಇರುವ ಸಭಾಂಗಣ ಸಂಪರ್ಕ ಕೊಂಡಿ ಯಾಗಲಿದೆ. ಇಲ್ಲಿ ವಿಭಿನ್ನ ಧರ್ಮಗಳ ಜನರು ಸೇರಿ ಪರಸ್ಪರ ಸಂವಾದಗಳನ್ನು ನಡೆಸುವವ ಮೂಲಕ ಪರಸ್ಪರರನ್ನು ಅರ್ಥ ಮಾಡಕೊಳ್ಳಬಹುದಾಗಿದೆ.

  ‘ಹೌಸ್ ಆಫ್ ಒನ್ ’ ಈ ನಗರದಲ್ಲಿರುವ ಮತ್ತು ಈ ದೇಶದಲ್ಲಿರುವ ಮುಸ್ಲಿಮರಿಗೆ ಮುಕ್ತ ವಾತಾವರಣವನ್ನು ಒದಗಿಸಲಿದೆ. ಇತರ ಧರ್ಮಗಳೊಂದಿಗೆ ಫಲಪ್ರದ ವಿಚಾರ ವಿನಿಮಯಗಳಿಗೆ ಇದು ಉತ್ತಮ ವೇದಿಕೆಯಾಗಲಿದೆ ಎನ್ನುವುದು ಈ ಪರಿಕಲ್ಪನೆಯ ಹಿಂದಿರುವ ವ್ಯಕ್ತಿಗಳಲ್ಲೋರ್ವರಾಗಿರುವ ಇಮಾಂ ಕಾದಿರ್ ಸಾನ್ಸಿ ಅವರ ಅಭಿಪ್ರಾಯ.

►ಜೆರುಸಲೇಂ

ಈ ನಗರದಲ್ಲಿ ಶತಮಾನಗಳಿಂದಲೂ ವಿವಿಧ ಧರ್ಮಗಳ ಆರಾಧನಾ ತಾಣಗಳು ಪರಸ್ಪರ ಹೊಂದಿಕೊಂಡಿಯೇ ಅಸ್ತಿತ್ವದಲ್ಲಿವೆ.

 ಒಂದು ಚ.ಕಿ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ ಅಲ್ ಅಕ್ಸಾ ಮಸೀದಿ, ಕ್ರಿ.ಶ. 690ರಲ್ಲಿ ನಿರ್ಮಾಣಗೊಂಡ ಮುಸ್ಲಿಮರ ಆರಾಧನಾ ತಾಣ ಡೋಮ್ ಆಫ್ ದಿ ರಾಕ್, ಕಂಡೆಮ್ನೇಷನ್ ಆ್ಯಂಡ್ ಇಂಪೋಸಿಷನ್ ಆಫ್ ದಿ ಕ್ರಾಸ್ ಚರ್ಚ್, ನಾಲ್ಕನೇ ಶತಮಾನದ ಹೋಲಿ ಸೆಪುಲ್ಚರ್ ಚರ್ಚ್, ರಷ್ಯನ್ ಆರ್ಥೊಡೆಕ್ಸ್ ಚರ್ಚ್ ಮೇರಿ ಮ್ಯಾಗ್ದಲೀನ್, ಸೈಂಟ್ ಆ್ಯನ್ಸ್ ಚರ್ಚ್ ಮತ್ತು ಅಲ್-ಬುರಕ್ ವಾಲ್ ಇಲ್ಲಿ ನೆಲೆಗೊಂಡಿವೆ. ಇದೇ ಪ್ರದೇಶದಲ್ಲಿಯ ಬೆಟ್ಟದ ತುದಿಯಲ್ಲಿರುವ ಪವಿತ್ರ ತಾಣ ಟೆಂಪಲ್ ವೌಂಟ್ ಇಸ್ಲಾಂ, ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳಿಗೆ ಸಂಬಂಧಿಸಿದ ರಚನೆಗಳನ್ನು ಒಳಗೊಂಡಿದೆ.

►ಕಾರ್ಡೋಬಾ

 ಸ್ಪೇನಿನ ಕಾರ್ಡೋಬಾ ನಗರ ಅತ್ಯಂತ ಆಸಕ್ತಿಪೂರ್ಣ ಅಂತರ ಧರ್ಮೀಯ ರಚನೆಗಳನ್ನು ಹೊಂದಿದೆ. ಮೂಲತಃ ಕ್ರೈಸ್ತರಿಗೆ ಸೇರಿದ ಪುಟ್ಟ ಮಸೀದಿ-ಕೆಥಡ್ರಲ್ ಆಫ್ ಕಾರ್ಡೋಬಾ ಹಲವಾರು ವರ್ಷಗಳಿಂದಲೂ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಪವಿತ್ರ ಸ್ಥಳವಾಗಿದ್ದು, ಬಳಿಕ ಆಗಿನ ಆಮಿರ್ ‘ಅಬ್ದ್ ಅಲ್-ರಹಮಾನ್ 1ಅವರ ಕಾಲದಲ್ಲಿ ಕಾರ್ಡೋಬಾದ ಗ್ರಾಂಡ್ ಮಸೀದಿಯಾಗಿ ಪರಿವರ್ತನೆಗೊಂಡಿತ್ತು.13ನೇ ಶತಮಾನದಲ್ಲಿ ಇದು ರೋಮನ್ ಕ್ಯಾಥಲಿಕ್ ಚರ್ಚ್ ಆಗಿ ರೂಪಾಂತರಗೊಂಡಿತ್ತು. ಈಗಲೂ ಮಸೀದಿ-ಕೆಥಡ್ರಲ್ ಆಫ್ ಕಾರ್ಡೋಬಾ ಎಂದೇ ಕರೆಯಲಾಗುವ ಇದು ಸೈನಾಗಾಗ್ ಮತ್ತು ಇತರ ಕ್ಯಾಥಲಿಕ್ ಚರ್ಚ್‌ಗಳಿಂದ ಸುಮಾರು 300 ಮೀ.ಅಂತರದಲ್ಲಿದೆ.

►ಮುಂಬೈ

  ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿ ವಿವಿಧ ಧರ್ಮಗಳ ಹಲವಾರು ಆರಾಧನಾ ಸ್ಥಳಗಳು ಕಣ್ಣಿಗೆ ಬಿಳುತ್ತವೆ. ಜಾಮಾ ಮಸೀದಿ,ಅವರ್ ಲೇಡಿ ಆಫ ಹೆಲ್ತ್ ಕ್ಯಾವೆಲ್ ಚರ್ಚ್, ಶಾರ್ ಹರ್‌ಹಮೀಮ್ ಸೈನಾಗಾಗ್,ಪಾರ್ಸಿಗಳ ದೇವಸ್ಥಾನ ಮತ್ತು ಹಲವಾರು ಹಿಂದು ದೇಗುಲಗಳು ಇಲ್ಲಿ ನೆಲೆಗೊಂಡಿವೆ.

►ಇಸ್ತಾಂಬುಲ್

 ಇಸ್ತಾಂಬುಲ್‌ನ ಫೆನರ್‌ನಲ್ಲಿ ಒಂದು ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿ ಫತಿಯೆ ಮಸೀದಿ,ಅಹ್ರಿದಾ ಸೈನಾಗಾಗ್,ಸೈಂಟ್ ಮೇರಿ ಆಫ್ ದಿ ಮಂಗ್ಲೋಸ್ ಚರ್ಚ್ ,ಪ್ಯಾಟ್ರಿಯಾಕ್ ಆಫ್ ಕಾನ್‌ಸ್ಟಂಟಿನೋಪಲ್ ಆರ್ಥೊಡೆಕ್ಸ್ ಚರ್ಚ್, ಗುಲ್ ಮಸೀದಿ ಮತ್ತು ಯವುಜ್ ಸಲೀಂ ಮಸೀದಿ ಹೀಗೆ ಆರು ಪವಿತ್ರ ಸ್ಥಳಗಳಿವೆ.

►ಬೀರುಟ್

 ಬೀರುಟ್‌ನ ಹೃದಯಭಾಗದಲ್ಲಿ ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿ ಮುಹಮ್ಮದ್ ಅಲ್-ಅಮೀನ್ ಮಸೀದಿ, ಸೈಂಟ್ ಜಾರ್ಜ್ ಗ್ರೀಕ್ ಆರ್ಥೊಡೆಕ್ಸ್ ಕೆಥೆಡ್ರಲ್, ಸೈಂಟ್ ಜಾರ್ಜ್‌ಸ್ ಮ್ಯಾರೊನೈಟ್ ಕೆಥಡ್ರಲ್, ಮಾಘೆನ್ ಅಬ್ರಹಾಂ ಸೈನಾಗಾಗ್ ಮತ್ತು ನ್ಯಾಷನಲ್ ಇವಾಂಜೆಲಿಕಲ್ ಚರ್ಚ್ ಹೀಗೆ ಐದು ಆರಾಧನಾ ತಾಣಗಳಿವೆ.

►ಸಾರಾಜೆವೊ

 ಇಲ್ಲಿ ಮಸೀದಿ,ಚರ್ಚ್ ಮತ್ತು ಸೈನಾಗಾಗ್ ಪರಸ್ಪರ ಹೊಂದಿಕೊಂಡಿಯೇ ಇರುವುದು ಅಚ್ಚರಿ ಮೂಡಿಸುತ್ತದೆ. ನಗರದ ಅತ್ಯಂತ ಪುರಾತನ ಆರಾಧನಾ ತಾಣವಾಗಿರುವ ಎಂಪರರ್ಸ್ ಮಸೀದಿ ಸೈಂಟ್ ಆ್ಯಂಥನಿ ಕ್ಯಾಥಲಿಕ್ ಚರ್ಚ್‌ನಿಂದ ಸುಮಾರು 100 ಮೀ. ಮತ್ತು ಅಷ್ಕೆನಾಝಿ ಸೈನಾಗಾಗ್‌ನಿಂದ ಸುಮಾರು 600 ಮೀ.ಅಂತರದಲ್ಲಿದೆ. ಇವೆಲ್ಲವೂ ಮಿಲ್ಜಾಕಾ ನದಿಯ ತೀರದಲ್ಲಿ ನೆಲೆಗೊಂಡಿವೆ. ಆರ್ಥೊಡೆಕ್ಸ್ ಚರ್ಚ್ ನೇಟಿವಿಟಿ ಆ್ಯಂಡ್ ಥಿಯೊಟೋಕಸ್‌ನ ಕೆಥೆಡ್ರಲ್, ಫರ್‌ಹದಿಜಾ ಮಸೀದಿ, ಸೇಕ್ರೆಡ್ ಹಾರ್ಟ್ ಕೆಥೆಡ್ರಲ್, ಗಾಝಿ ಹಸ್ರವ್-ಬಿ ಮಸೀದಿ ಮತ್ತು ಹೋಲಿ ಆರ್ಚ್‌ಏಂಜಲ್ಸ ಮಿಖಾಯೆಲ್ ಆ್ಯಂಡ್ ಗೇಬ್ರಿಯಲ್ ಚರ್ಚ್‌ನಂತಹ ಇನ್ನಿತರ ಪವಿತ್ರ ಸ್ಥಳಗಳೂ ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣದ ಈ ಪ್ರದೇಶದಲ್ಲಿವೆ.

►ಪಾಲೆರ್ಮೊ

ಇಟಲಿಯ ಪಾಲೆರ್ಮೊ ನಗರದ ಟ್ಯುನಿಸಿಯಾ ಮಸೀದಿಯು ಕೆಥಡ್ರಲ್ ಮತ್ತು ಇತರ ಹಲವಾರು ಚರ್ಚ್‌ಗಳಿಂದ 500 ಮೀ.ಗೂ.ಕಡಿಮೆ ಅಂತರದಲ್ಲಿದೆ. ಈ ಪೈಕಿ ಸಾಂತಾ ಮರಿಯಾ ಡೆಲ್ ಸಬಾಟೊ ಚರ್ಚ್ ತನ್ನದೊಂದು ಸಭಾಂಗಣವನ್ನು ಸೈನಾಗಾಗ್ ಆಗಿ ಪರಿವರ್ತಿಸಲು ಈ ವರ್ಷದ ಜನವರಿಯಲ್ಲಿ ನಿರ್ಧರಿಸಿದೆ.

►ಪನಾಮಾ

ಮಧ್ಯ ಅಮೆರಿಕದ ನಗರಗಳಲ್ಲಿ ಇಂತಹ ಅಂತರ್ ಧಾರ್ಮಿಕತೆ ಸ್ವಲ್ಪ ಅಪರೂಪವೇ ಆಗಿದ್ದರೂ ಪನಾಮಾ ನಗರ ಅದಕ್ಕೆ ಅವಕಾಶ ಕಲ್ಪಿಸಿದೆ. ಕ್ಯಾಸ್ಕೋ ವೀಜೊ ಮತ್ತು ಪಂಟಾ ಪೈಟಿಲ್ಲಾ ನಡುವೆ ಸುಮಾರು ಒಂದು ಚ.ಕಿ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ ಚರ್ಚ್,ಮಸೀದಿ ಮತ್ತು ಸೈನಾಗಾಗ್ ಇವೆ.

►ಸಿಂಗಾಪುರ

ಇಲ್ಲಿ ಬೌದ್ಧರು,ಕ್ರೈಸ್ತರು,ಹಿಂದುಗಳು ಮತ್ತು ಇತರ ಧರ್ಮಗಳ ಜನರು ಸಹಬಾಳ್ವೆ ನಡೆಸುತ್ತಿದ್ದಾರೆ. ನಗರದ ಹೃದಯಭಾಗವಾದ ಟೆಲೋಕ್ ಆಯರ್ ರಸ್ತೆಯಲ್ಲಿ ಹೆಜ್ಜೆಗಳನ್ನು ಹಾಕಿದರೆ ಐದು ವಿಭಿನ್ನ ಧರ್ಮಗಳ ಆರಾಧನಾ ತಾಣಗಳು ಕಣ್ಣಿಗೆ ಬೀಳುತ್ತವೆ. ಹಿಂದುಗಳ ಶ್ರೀಮಾರಿಯಮ್ಮನ್ ದೇವಸ್ಥಾನ, ಬೌದ್ಧರ ಮಂದಿರ, ಅಲ್ ಅರ್ಬ್ರಾರ್ ಮಸೀದಿ, ಚೈನೀಸ್ ಮೆಥಾಡಿಸ್ಟ್ ಚರ್ಚ್ ಮತ್ತು ಚೈನೀಸ್ ಮಂದಿರ ಥಿಯಾನ್ ಹಾಕ್ ಕೆಂಗ್ ಇವೆಲ್ಲವೂ ಇಲ್ಲಿ ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News