×
Ad

ಕಸ್ತೂರಿ ರಂಗನ್ ವರದಿ ಬಗ್ಗೆ ಸದಾನಂದ ಗೌಡ ಸುಳ್ಳು ಹೇಳಿದ್ದಾರೆ: ಸಿಪಿಐಎಂ ಆರೋಪ

Update: 2017-04-25 17:58 IST

ಮಡಿಕೇರಿ, ಎ.25: ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನಗೊಳ್ಳಲು ಅವಕಾಶ ನೀಡುವುದಿಲ್ಲವೆಂದು ಕೊಡಗಿನಲ್ಲಿ ಸುಳ್ಳು ಹೇಳಿಕೆ ನೀಡುವ ಬದಲು ದಿಲ್ಲಿಯಲ್ಲಿ ಈ ಕುರಿತು ಯಾವ ಪ್ರಯತ್ನ ನಡೆಸಿದ್ದಾರೆ ಎಂಬುದನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಬೇಕೆಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಇ.ರ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸದಾನಂದ ಗೌಡರು ಡಾ.ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡುವುದಿಲ್ಲವೆಂದು ಕೊಡಗಿನ ಜನರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರಗಳಂತೆ ಕರ್ನಾಟಕ ಸರಕಾರ ಕೇಂದ್ರಕ್ಕೆ ಮಾಹಿತಿ ರವಾನಿಸಿಲ್ಲ. ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳುವ ಮೂಲಕ ಸದಾನಂದ ಗೌಡರು ಬಿಜೆಪಿಯ ವಚನಭ್ರಷ್ಟತೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿಯ ಪ್ರಣಾಳಿಕೆಯ ಪ್ರಕಾರ ಅಧಿಕಾರಕ್ಕೆ ಬಂದರೆ ಡಾ.ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಲು ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಲಾಗಿತ್ತು. ಈ ಭರವಸೆಯಂತೆ ನಡೆದುಕೊಳ್ಳದ ಬಿಜೆಪಿ ಮುಖಂಡರು ಇದೀಗ ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಟೀಕಿಸುವ ಬಿಜೆಪಿ ಕೇಂದ್ರದಲ್ಲಿರುವ ತನ್ನ ಸರಕಾರದ ಮೇಲೆ ಪ್ರಭಾವ ಬೀರಿ ವರದಿ ಜಾರಿಯಾಗದಂತೆ ತಡೆಯಬಹುದಲ್ಲವೇ ಎಂದು ಪ್ರಶ್ನಿಸಿದರು.

ಕೇರಳದ ಮಾದರಿಯಲ್ಲಿ ಕರ್ನಾಟಕ ಸರಕಾರವು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಬೇಕೆಂದು ಡಿ.ವಿ. ಸದಾನಂದ ಗೌಡರು ನೀಡಿರುವ ಸಲಹೆ ಅರ್ಥಹೀನವಾಗಿದೆ. ಎರಡೂ ರಾಜ್ಯಗಳ ವರದಿಯಲ್ಲಿನ ವ್ಯತ್ಯಾಸಗಳನ್ನು ಅರಿಯದ ಸದಾನಂದ ಗೌಡರು ಕೇಂದ್ರ ಸಚಿವರಾಗಲು ಅರ್ಹರಲ್ಲವೆಂದು ಡಾ.ದುರ್ಗಾಪ್ರಸಾದ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಬಿ. ರಮೇಶ್ ಹಾಗೂ ಎ.ಸಿ. ಸಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News