ಮುಗ್ಗಲು ಮೇವು ಸೇವನೆ: ಹಸುಗಳ ಸರಣಿ ಸಾವು

Update: 2017-04-25 12:31 GMT

ಗುಂಡ್ಲುಪೇಟೆ, ಎ.25: ಮುಗ್ಗಲು ಹಿಡಿದ ಮೇವು ಸೇವಿಸಿದ ಆರು ಹಸುಗಳು ಸಾವನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನಲ್ಲಿನ ಭೀಕರ ಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನೆರವಿನಡಿ  ಮಲ್ಲಯ್ಯನಪುರ ಗ್ರಾಮಸ್ಥರು ಪಶು ಸಂಗೋಪನಾ ಮತ್ತು ಕಂದಾಯ ಇಲಾಖೆಯಿಂದ ನೀಡುವ ಮೇವನ್ನು ಖರೀದಿಸಿದ್ದರು. ಅದನ್ನು ಸೇವಿಸಿದ ಗ್ರಾಮದ ಆರು ಹಸುಗಳು ಸೋಮವಾರ ಮಧ್ಯಾಹ್ನ ಸಾವಿಗೀಡಾಗಿದ್ದು, ಮತ್ತೆ ಹಲವು ಹಸುಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ನಿವಾಸಿಗಳಾದ ಸುನಂದಮ್ಮ ಮತ್ತು ಕೆಂಪಮ್ಮ ಎಂಬುವವರಿಗೆ ಸೇರಿದ ತಲಾ ಎರಡು ಹಸುಗಳು ಹಾಗೂ ಲಲಿತಮ್ಮ, ಸರಸ್ವತಮ್ಮ ಎಂಬುವವರಿಗೆ ಸೇರಿದ ತಲಾ ಒಂದೊಂದು ಹಸುಗಳು ಮೇವನ್ನು ಸೇವಿಸಿ ಸಾವಿಗೀಡಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇಲಾಖೆ ನೀಡಿದ್ದ ಮೇವಿನಿಂದಲೇ ಹಸುಗಳು ಸಾವಿಗೀಡಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಮೇವಿನಿಂದಲೇ ಹಸುಗಳು ಸಾವಿಗೀಡಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಮೇವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News