ಕೊಡಗು ಜಿಪಂ, ಪಾಲಿಬೆಟ್ಟ, ಸಂಪಾಜೆ ಗ್ರಾಪಂಗಳಿಗೆ ಸಶಸ್ತೀಕರಣ ಪುರಸ್ಕಾರ

Update: 2017-04-25 12:54 GMT

ಮಡಿಕೇರಿ, ಎ.25: ಅತ್ಯುತ್ತಮ ಸಾಧನೆ ಮಾಡಿದ ಜಿಪಂ ಹಾಗೂ ಗ್ರಾಪಂಗೆ ನೀಡುವ 2015-16ನೇ ಸಾಲಿನ ಪಂಚಾಯತ್ ಸಶಸ್ತೀಕರಣ ಪುರಸ್ಕಾರವನ್ನು ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯದ ವತಿಯಿಂದ ಕೊಡಗು ಜಿಪಂ, ಪಾಲಿಬೆಟ್ಟ ಗ್ರಾಪಂ ಹಾಗೂ ಸಂಪಾಜೆ ಗ್ರಾಪಂಗೆ ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಅಂಗವಾಗಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಪಾಲಿಬೆಟ್ಟ ಗ್ರಾಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ ಹಾಗೂ ಸಂಪಾಜೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಕಳಗಿ ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯಕ್ಕೆ ಒಟ್ಟು 7 ಪ್ರಶಸ್ತಿಗಳು ದೊರಕಿದ್ದು, ಮೂರು ಪ್ರಶಸ್ತಿಗಳು ಕೊಡಗಿನ ಪಾಲಾಗಿದೆ. ರಾಜ್ಯದ 30 ಜಿಪಂಗಳ ಪೈಕಿ ಕೊಡಗು ಮಾಡಿದ ಅತ್ಯುತ್ತಮ ಸಾಧನೆಗಾಗಿ ಪಂಚಾಯತ್ ಸಶಕ್ತೀಕರಣ ಪುರಸ್ಕಾರ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಪಂ, ಶಿವಮೊಗ್ಗ ಜಿಲ್ಲೆಯ ಸಾಗರ ತಾಪಂ ಹಾಗೂ ಥಿಮೇಟಿಕ್ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಕೆಸರಮಡು ಗ್ರಾಪಂ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಪಂ ಹಾಗೂ ಸಾಮಾನ್ಯ ವಿಭಾಗದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಪಂ, ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಪಂಗಳು ಕೇಂದ್ರ ಸರಕಾರದ ಸಶಕ್ತೀಕರಣ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಪಾಲಿಬೆಟ್ಟ ಸಾಧನೆ: ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತ್ ಇಡೀ ರಾಜ್ಯದಲ್ಲೇ ಶೇ.99ರಷ್ಟು ತೆರಿಗೆ ಸಂಗ್ರಹಿಸುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಸಾವಯವ ಗೊಬ್ಬರ ಘಟಕ ಆರಂಭ, ಕುಡಿಯುವ ನೀರಿಗೆ ಮೀಟರ್ ಅಳವಡಿಕೆ, 2011ರಿಂದ ಪವರ್ ಪಾಯಿಂಟ್ ಪ್ರಸ್ತುತಿ ಮೂಲಕ ಗ್ರಾಮಸಭೆ, ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ಮೀಟರ್ ಅಳವಡಿಸಿ ಮಾದರಿ ಗ್ರಾಪಂ ಆಗಿ ರೂಪುಗೊಂಡಿದೆ. ಈ ಹಿಂದೆ ನಿರ್ಮಲ ಗ್ರಾಮ ಪುರಸ್ಕಾರ, ಸುವರ್ಣ ನೈರ್ಮಲ್ಯ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಪಾಲಿಬೆಟ್ಟ ಗ್ರಾಪಂ ಪಡೆದುಕೊಂಡಿದೆ.

ಸಂಪಾಜೆ ಸಾಧನೆ: ಸಂಪಾಜೆ ಪಂಚಾಯತ್ ತನ್ನ ವ್ಯಾಪ್ತಿಯ 570 ಮನೆಗಳಿಗೆ ಗ್ರ್ಯಾವಿಟಿ ವಾಟರ್ ನೀಡುತ್ತಿದೆ. ರಸ್ತೆ, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ಯಶಸ್ವಿಯಾಗಿ ಪೂರೈಸಲಾಗುತ್ತಿದೆ. ಸರಕಾರದ ಎಲ್ಲಾ ಅನುದಾನಗಳನ್ನು ಸಮರ್ಪವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಅನುದಾದವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಸ್ವಚ್ಛತಾ ಆಂದೋಲನದಲ್ಲಿ 2014-15ರಲ್ಲಿ ರಾಜ್ಯ ಪ್ರಶಸ್ತಿ, ಉದ್ಯೋಗ ಖಾತ್ರಿ, ಆಶ್ರಯ ಮನೆ ವಸತಿ ಯೋಜನೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News