ಶಿವಮೊಗ್ಗ ಬಿಜೆಪಿಯಲ್ಲಿ ಮತ್ತೆ ಶುರುವಾದ ಬಣ ರಾಜಕಾರಣ

Update: 2017-04-25 13:05 GMT

ಶಿವಮೊಗ್ಗ, ಎ.25: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತವರೂರು ಶಿವಮೊಗ್ಗದಲ್ಲಿ ಇದೀಗ ಮತ್ತೆ ಬಣ ರಾಜಕಾರಣ ಪ್ರಾರಂಭವಾಗಿದ್ದು, ಬಿ.ಎಸ್.ಯಡಿಯೂರಪ್ಪ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಪಕ್ಷದ ಮುಖಂಡರು ಮತ್ತೆ ಸಕ್ರಿಯರಾಗಿದ್ದಾರೆ.

ಇದಕ್ಕೆ ನಿದರ್ಶನವೆಂಬಂತೆ, ಜಿಲ್ಲೆಯ ಸಾಗರ ಪಟ್ಟಣದಲ್ಲಿ ಕೆಲ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮುಖಂಡರು, ಕಾರ್ಯಕರ್ತರು ಬಿ.ಎಸ್.ವೈ. ವಿರೋಧಿ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ ಎಂಬುದು ಕುತೂಹಲ ಕೆರಳುವಂತೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಎ.27ರಂದು ಆಯೋಜಿಸಲಾಗಿರುವ ಬಿಜೆಪಿ ಭಿನ್ನಮತೀಯರ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಈ ಸಭೆ ನಡೆಸಲಾಗಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳುವ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ವೈ. ಹಾಗೂ ಅವರ ಬೆಂಬಲಿಗರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳಿಗೆ ಬಿ.ಎಸ್.ವೈ. ನೇರ ಕಾರಣಕರ್ತರಾಗಿದ್ದಾರೆ ಎಂದು ದೂರಿದ್ದಾರೆನ್ನಲಾಗಿದೆ.
ಪಕ್ಷದ ತತ್ವ, ಸಿದ್ದಾಂತಗಳಿಗೆ ವಿರುದ್ಧವಾಗಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಬಿ.ಎಸ್.ವೈ., ಜಿಲ್ಲೆ-ತಾಲೂಕು ಮಟ್ಟದಲ್ಲಿ ಅವರ ಹಿಂಬಾಲಕರು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಮೂಲ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆಯಾಗುತ್ತಿದೆ ಎಂದು ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಣ ರಾಜಕಾರಣ: ಬಿ.ಎಸ್. ಯಡಿಯೂರಪ್ಪ ಬಿಜೆಪಿ ತೊರೆದು ಮರು ಸೇರ್ಪಡೆಯಾದ ನಂತರ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಬಿ.ಎಸ್.ವೈ. ಹಾಗೂ ಈಶ್ವರಪ್ಪ ಬಣಗಳು ಸೃಷ್ಟಿಯಾಗಿವೆ. ಎರಡೂ ಬಣಗಳಲ್ಲಿ ಮುಖಂಡರು, ಕಾರ್ಯಕರ್ತರು ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಆದರೆ ಕೆಲವರು ಮಾತ್ರ ಈ ಎರಡೂ ಬಣಗಳಿಂದ ಅಂತರ ಕಾಯ್ದುಕೊಂಡು ತಮ್ಮದೇ ಆದ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದ ನಂತರ ಬಣ ರಾಜಕಾರಣದ ಚಟುವಟಿಕೆಗಳು ಬಿರುಸುಗೊಂಡಿದೆ. ಜಿಲ್ಲಾಧ್ಯಕ್ಷರ ನೇಮಕದ ವೇಳೆ ಈಶ್ವರಪ್ಪರನ್ನು ಕಡೆಗಣಿಸಿ, ತಮ್ಮ ಕಟ್ಟಾ ಬೆಂಬಲಿಗ ಎಸ್.ರುದ್ರೇಗೌಡರಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ ಎಂಬ ಆರೋಪವನ್ನು ಈಶ್ವರಪ್ಪ ಬಣ ಮಾಡಿತ್ತು. ಸ್ವತಃ ಈಶ್ವರಪ್ಪ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವರಿಷ್ಠರ ಬಳಿ ದೂರಿದ್ದರು.

ಈ ನಡುವೆ ಈಶ್ವರಪ್ಪ ತಮ್ಮದೆ ಆದ "ಸಂಗೊಳ್ಳಿ ರಾಯಣ್ಣ ಬ್ರಿಗೇಡ್" ಕಟ್ಟಿಕೊಂಡು ರಾಜ್ಯಾದ್ಯಂತ ಸಂಘಟನೆ ಮಾಡಲಾರಂಭಿಸಿದರು. ಇದು ಬಿ.ಎಸ್.ವೈ. ಹಾಗೂ ಈಶ್ವರಪ್ಪರ ನಡುವೆ ನೇರಾನೇರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಸಂಘಟನೆ ವಿಸರ್ಜಿಸುವಂತೆ ಬಿ.ಎಸ್.ವೈ. ಹೊರಡಿಸಿದ್ದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಈಶ್ವರಪ್ಪ ಸಂಘಟನೆಯ ಸಮಾವೇಶಗಳನ್ನು ಮುಂದುವರಿಸಿದ್ದರು.

ಇದು ಬಿಜೆಪಿಯಲ್ಲಿ ದೊಡ್ಡ ಗೊಂದಲ ಸೃಷ್ಟಿಸಿತ್ತು. ಅಂತಿಮವಾಗಿ ಪಕ್ಷದ ರಾಷ್ಟ್ರೀಯ ವರಿಷ್ಠರ ಬಳಿ ದೂರುಗಳು ದಾಖಲಾಗಿದ್ದವು. ಅಮಿತ್ ಶಾರವರೇ ಬಿ.ಎಸ್.ವೈ. ಹಾಗೂ ಈಶ್ವರಪ್ಪರೊಂದಿಗೆ ಮಾತುಕತೆ ನಡೆಸಿ ಭಿನ್ನಮತ ಶಮನಗೊಳಿಸಿದ್ದರು. ಇನ್ನೇನೂ ಬಿಜೆಪಿಯಲ್ಲಿ ಎಲ್ಲವೂ ಸರಿಯಾಯ್ತು ಎನ್ನುತ್ತಿದಂತೆ ಇದೀಗ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದೆ.

ಪಕ್ಷದಲ್ಲಿರುವ ಬಿ.ಎಸ್.ವೈ. ವಿರೋಧಿಗಳು ಮತ್ತೊಮ್ಮೆ ಸಕ್ರಿಯವಾಗಿದ್ದು, ಬಹಿರಂಗವಾಗಿಯೇ ತೊಡೆ ತಟ್ಟಲಾರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

ಜಿಲ್ಲಾಧ್ಯಕ್ಷರ ಬಗ್ಗೆಯೂ ಅಸಮಾಧಾನ...!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಎ.27 ರಂದು ಆಯೋಜಿಸಲಾಗಿರುವ ಸಭೆಗೆ ತೆರಳುವುದಕ್ಕೆ ಸಂಬಂಧಿಸಿದಂತೆ ಸಾಗರ ಪಟ್ಟಣದ ಅಜಿತ್ ಸಭಾಭವನದಲ್ಲಿ ಬಿಜೆಪಿಯ ಕೆಲ ಮುಖಂಡರ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಕೆಲ ಮುಖಂಡರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಸೇರಿದಂತೆ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಕೆಲ ಮುಖಂಡರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News