ಪಿಡಿಒ, ಸೋಷಿಯಲ್ ಆಡಿಟರ್‌ಗಳನ್ನು ಕೊಠಡಿಯಲ್ಲಿ ಕೂಡಿಹಾಕಿದ ಗ್ರಾಮಸ್ಥರು

Update: 2017-04-25 13:12 GMT

ಮೂಡಿಗೆರೆ, ಎ.25: ಎನ್‌ಆರ್‌ಐಜಿ ಕಾಮಗಾರಿಗಳ ಬಗ್ಗೆ ಸೋಷಿಯಲ್ ಆಡಿಟರ್‌ಗಳು ಸಮರ್ಪಕವಾಗಿ ಪರಿಶೀಲಿಸದೇ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಹೆಸಗಲ್ ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮಸಭೆಯನ್ನು ಬಹಿಷ್ಕರಿಸಿದ ಹೆಸಗಲ್ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು, ಪಿಡಿಒ ಸೇರಿದಂತೆ 5 ಮಂದಿ ಸೋಷಿಯಲ್ ಆಡಿಟರ್‌ಗಳನ್ನು ಕೊಠಡಿಯೊಳಗೆ ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಹೆಸಗಲ್ ಗ್ರಾಪಂ ಸದಸ್ಯ ಹೆಸಗಲ್ ಗಿರೀಶ್ ಮಾತನಾಡಿ, ಕಳೆದ ಬಾರಿ ಎನ್‌ಆರ್‌ಐಜಿ ಯೋಜನೆಯಲ್ಲಿ ಬಾಕ್ಸ್ ಚರಂಡಿ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಜನರಿಗೆ ಕೂಲಿ ನೀಡಲಾಗಿದೆ. ಮೆಟಿರಿಯಲ್ ಬಿಲ್ ಇನ್ನೂ ಬಂದಿಲ್ಲ. ಇಂತಹದಕ್ಕೆಲ್ಲಾ ಎನ್‌ಜಿಒದಿಂದ ನೇಮಕವಾದ ಸೋಶಿಯಲ್ ಆಡಿಟರ್‌ಗಳು ಆಕ್ಷೇಪಣೆ ಮತ್ತು ಮರುಪಾವತಿಗೆ ಬರೆದಿದ್ದಾರೆ. ಈ ಬಾರಿಯ ಎನ್‌ಆರ್‌ಐಜಿಯಲ್ಲಿ ಮೀನಾಕ್ಷಿ ಬಾಲಕೃಷ್ಣ ಎಂಬವರು ದನದ ಕೊಟ್ಟಿಗೆ ನಿರ್ಮಿಸಿದ್ದಾರೆ. ಕೊಟ್ಟಿಗೆಯಲ್ಲಿ ದನವಿಲ್ಲದ ಒಂದೇ ಕಾರಣಕ್ಕೆ ಕಾಮಗಾರಿಯ ಹಣವನ್ನು ಪಿಡಿೊ ಮತ್ತು ಅಧ್ಯಕ್ಷರು ಸರಕಾರಕ್ಕೆ ಮರುಪಾವತಿ ಮಾಡಲು ಬರೆದಿದ್ದಾರೆ ಎಂದು ದೂರಿದರು.

6 ತಿಂಗಳಿನಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಬಿಲ್ ಆಗುವ ಸಮಯದಲ್ಲಿ ಅದಕ್ಕೆ ಬೋರ್ಡ್ ಹಾಕಿ. ಕಡತಗಳಲ್ಲಿ ದಾಖಲಿಸಲಾಗಿದೆ. ಅಂತಹ ಕಾಮಗಾರಿಗಳಿಗೂ ಆಕ್ಷೇಪಣೆ ಮತ್ತು ಹಣ ಮರುಪಾವತಿಗೆ ಬರೆದಿದ್ದಾರೆ. ಹಳೆಮೂಡಿಗೆರೆ, ಜಾವಳಿ ಸೇರಿದಂತೆ ಅನೇಕ ಗ್ರಾಪಂಗಳಲ್ಲಿ ಈ ರೀತಿ ಮಾಡಿದ್ದಾರೆಂದು ತಿಳಿದುಬಂದಿದೆ. ಕಾಮಗಾರಿಗಳ ಬಗ್ಗೆ ಜನರೇ ಒಪ್ಪಿಕೊಂಡರೂ ಇವರು ಒಪ್ಪಿಕೊಳ್ಳುವುದಿಲ್ಲ. ಇದನ್ನೆಲ್ಲಾ ಗಮನಿಸಿದರೆ ಹಣ ಮಾಡುವ ತಂತ್ರವಿರಬಹುದೆಂದು ಅವರು ಆರೋಪಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಕರರ ಮನ ವೊಲಿಸಲು ಪ್ರಯತ್ನಿಸಿದರು. ಆದರೆ ಸಂಬಂಧಿಸಿದ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಕೂಡಲೇ ನೋಡಲ್ ಅಧಿಕಾರಿ ಭಾರತಿ ಸ್ಥಳಕ್ಕೆ ಆಗಮಿಸಿ ಸಭೆ ನಡೆಸಲು ಅನುವು ಮಾಡಿಕೊಡಲು ಮನವಿ ಮಾಡಿದರು. ಬಳಿಕ ಸಭೆ ಮುಂದುವರೆಯಿತು.

ಈ ಸಂದರ್ಭ ಹೆಸಗಲ್ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಪ್ರಶಾಂತ್, ಪೂರ್ಣಿಮಾ, ಕಾಮಾಕ್ಷಿ, ಅನಿತಾ, ಆದರ್ಶ, ಮಹಿದ್ದೀನ್ ಸೇಟ್, ಗ್ರಾಮಾಸ್ಥರಾದ, ವಿಂತೇಶ್, ಶರೀಪ್, ಆಸಿಫ್, ತಾರನಾಥ್, ಉಮೇಶ್, ಆನಂದ ಮತ್ತಿತರರಿದ್ದರು.

ನಾವು ನಿಯಮ ಮೀರಿ ಕೆಲಸ ಮಾಡಿಲ್ಲ. ಅಕ್ರಮಗಳು ನಡೆಯದಂತೆ ಎಲ್ಲಾ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುತ್ತಿದ್ದೇವೆ. ಇದನ್ನು ಸಹಿಸಲು ಸಾಧ್ಯವಾಗದೇ, ನಾವು ಹಣಕ್ಕಾಗಿ ಈ ರೀತಿ ಕೆಲಸ ಮಾಡುತ್ತಿದ್ದೇವೆಂದು ಆರೋಪ ಮಾಡುತ್ತಿರುವುದು ಸರಿಯಲ್ಲ.

-ಹೆಸರು ಹೇಳಲಿಚ್ಛಿಸದ ಆಡಿಟರ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News