ಚಾಮರಾಜನಗರ: ನಗರಾಭಿವೃದ್ಧಿಗಾಗಿ ಉಳಿತಾಯ ಬಜೆಟ್ ಮಂಡನೆ

Update: 2017-04-25 17:33 GMT

ಚಾಮರಾಜನಗರ, ಎ.25: ನಗರಾಭಿವೃದ್ಧಿ ಪ್ರಾಧಿಕಾರ 2017-18 ಸಾಲಿನ ಬಜೆಟ್ ಅನ್ನು ಅಧ್ಯಕ್ಷ ಸುಹೇಲ್ ಅಲಿ ಖಾನ್ ಇಂದು ಮಂಡನೆ ಮಾಡಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜೊತೆಗೆ 1.31 ಲಕ್ಷ ರೂ.ಗಳ ಉಳಿತಾಯ ಬಜೆಟ್ ಅನ್ನು ಮಂಡನೆ ಮಾಡಿದರು.

ನಗರದ ಜಿಲ್ಲಾಢಳಿತ ಭವನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸೋಮವಾರ ಬಜೆಟ್ ಮಂಡಿಸಿದ ಅವರು, 2017-18ನೇ ಸಾಲಿನಲ್ಲಿ ಪ್ರಾಧಿಕಾರಕ್ಕೆ ಪರಿಶೀಲನಾ ಶುಲ್ಕ, ಇತರ ಅಭಿವೃದ್ಧಿ ಶುಲ್ಕಗಳು ಸೇರಿ ಪ್ರಾಧಿಕಾರಕ್ಕೆ 12,82,25,599 ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ವಿವಿಧ ಬಾಬ್ತುಗಳಿಗೆ 11,51,18,500 ರು.ಗಳನ್ನು ಖರ್ಚು ಮಾಡಲಿದ್ದು, ಪ್ರಾಧಿಕಾರಕ್ಕೆ 1.31,07099 ರೂ. ಉಳಿತಾಯ ಬಜೆಟ್ ಆಗಿದೆ ಎಂದು ತಿಳಿಸಿದರು.

ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿ ಮಾಡಲು ಹಾಗೂ ಏಕನಿವೇಶನ ಪರಿವರ್ತನೆ ಅರ್ಜಿಗಳನ್ನು ವಿಲೇವಾರಿ ಮಾಡಿ, ಭೂ ಮಾಲಕರಿಂದ ಅಭಿವೃದ್ಧಿ ಶುಲ್ಕವನ್ನು ಪಡೆದು, ಪ್ರಾಧಿಕಾರರಿಂದ ಅನ್ಯಕ್ರಾಂತ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರಕ್ಕೆ ಏಕ ನಿವೇಶನದಡಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು 12 ಅರ್ಜಿಗಳು ಬಂದಿದ್ದು, ಪ್ರಾಧಿಕಾರದ ಸಭೆಯಲ್ಲಿಟ್ಟು ಅನುಮೋದನೆ ಪಡೆದು ಚುಡಾದ ನಿಯಮದ ಪ್ರಕಾರ ಅಭಿವೃದ್ಧಿ ಶುಲ್ಕವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಾಧಿಕಾರದಿಂದ ಬಡವರು ಹಾಗೂ ಮಧ್ಯಮ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಉತ್ತುವಳ್ಳಿ ಬಳಿ 5 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಲಾಗಿದೆ. ಜಿಲ್ಲಾಧಿಕಾರಿ ಬಿ. ರಾಮು ಒಪ್ಪಿಗೆ ನೀಡಿದ್ದು, ಕಂದಾಯ ಭೂಮಿಯನ್ನು ಚುಡಾಕ್ಕೆ ಹಸ್ತಾಂತರ ಮಾಡುತ್ತಿದ್ದಂತೆ ಭೂ ಪರಿವರ್ತನೆ ಮಾಡಿ, ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ, ಕುಡಿಯುವ ನೀರು, ಚರಂಡಿ, ರಸ್ತೆ, ಉದ್ಯಾನವನ ಸೇರಿದಂತೆ ಮೂಲಸೌಲಭ್ಯಗಳನ್ನು ಒಳಗೊಂಡು ಪ್ರಾಧಿಕಾರದ ನಿವೇಶವನ್ನು ಹಂಚಿಕೆ ಮಾಡಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸುಹೇಲ್ ಅಲಿ ಖಾನ್ ತಿಳಿಸಿದರು.

ಸಭೆಯಲ್ಲಿ ಚುಡಾ ಸದಸ್ಯರಾದ ಸುದರ್ಶನಗೌಡ, ಶ್ರೀಕಾಂತ್, ಆಶಾ, ಶ್ರೀನಿವಾಸ್, ಆಯುಕ್ತ ನಿಸಾರ್ ಅಹಮದ್, ಸೆಸ್ಕಾಂ, ನಗರಸಭೆ, ಲೋಕೊಪಯೋಗಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News