ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರ ಧರಣಿ

Update: 2017-04-25 17:47 GMT

ತುಮಕೂರು, ಎ.25: ಕಟ್ಟಡ ಸಾಮಗ್ರಿಗಳ ಬೆಲೆಗಳನ್ನು ನಿಯಂತ್ರಿಸಬೇಕು, ಸೆಸ್ ಸಂಗ್ರಹವನ್ನು ಶೇ1ರಿಂದ ಶೇ 2ಕ್ಕೆ ಹೆಚ್ಚಿಸಬೇಕು, ಕಲ್ಯಾಣ ಮಂಡಳಿಗಳಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ನಿಯೋಜಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಧರಣಿ ನಡೆಸಿದರು.

ನಗರದ ಟೌನ್‌ಹಾಲ್ ವೃತ್ತದಿಂದ ಎಂ.ಜಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಎಟಟಿಯುಸಿ ರಾಜ್ಯ ಮುಖಂಡ ಎನ್.ಶಿವಣ್ಣ, ದೇಶದಲ್ಲಿ ಸುಮಾರು 10 ಕೋಟಿಗಿಂತಲೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ಈ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕೆಂಬ ಉದ್ದೇಶದಿಂದ ಎಐಟಿಯುಸಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರಕಾರ 1996ರಲ್ಲಿ ಅಸಂಘಟಿತ ಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತಂದಿದೆ. ತೆರಿಗೆಯಿಂದ 4,000 ಕೋಟಿಗೂ ಅಧಿಕ ಹಣ ಆಯೋಗದಲ್ಲಿದ್ದರೂ ಇದುವರೆಗೂ ಕಾರ್ಮಿಕರಿಗೆ ಕೇವಲ 55 ಕೋಟಿ ರೂ.ಗಳನ್ನು ವಿವಿಧ 11 ಸೇವಾ ಸೌಲಭ್ಯಗಳಿಗಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಾಗಿದೆ. ನಮ್ಮ ಹಣವನ್ನು ನಮಗೆ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಧರಣಿನಿರತರನ್ನು ಉದ್ದೇಶಿಸಿ ಕಾರ್ಮಿಕ ಮುಖಂಡರಾದ ಗಿರೀಶ್, ಕಂಬೇಗೌಡ, ಗೌಡರಂಗಪ್ಪ, ಅಶ್ವಥನಾರಾಯಣ ಮಾತನಾಡಿದರು. 

ಶಶಿಕಾಂತ್, ನಾಗರತ್ನಮ್ಮ, ದೇವರಾಜು, ಶ್ರೀನಿವಾಸಮೂರ್ತಿ, ಮಂಜುನಾಥ್, ಸತ್ಯನಾರಾಯಣ, ನಾಗಣ್ಣ, ವಿಜಯಕುಮಾರ್ ಸೇರಿದಂತೆ ಸಾವಿರಾರು ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News