ರೈಲ್ವೆ ನಿಲ್ದಾಣಗಳಲ್ಲಿ ಆದ್ಯತೆ ಮೇರೆಗೆ ಭದ್ರತೆ: ರೈಲ್ವೆ ಡಿಐಜಿ ಡಿ.ಬಿ.ಕಸರ್

Update: 2017-04-25 18:21 GMT

ತುಮಕೂರು, ಎ.25: ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿಲ್ದಾಣಗಳಲ್ಲಿ ಆದ್ಯತೆ ಮೇರೆಗೆ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಸದರನ್ ರೈಲ್ವೆಯ ಹುಬ್ಬಳ್ಳಿ ವಲಯ ರೈಲ್ವೆ ಪೊಲೀಸ್ ವಿಭಾಗದ ಡಿಐಜಿ ಡಿ.ಬಿ. ಕಸರ್ ತಿಳಿಸಿದ್ದಾರೆ.

ಮಂಗಳವಾರ ನಗರದ ರೈಲ್ವೆ ನಿಲ್ದಾಣದಲ್ಲಿರುವ ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಮೈಸೂರು ಮತ್ತು ಯಶವಂತಪುರ ರೈಲ್ವೆಯ ನಿಲ್ದಾಣಗಳಲ್ಲಿ ಸಮಗ್ರವಾಗಿ ಸುರಕ್ಷತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿದೆ. ಜನರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಅನುಮಾನ ಬಂದ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗುವುದು.ವಾಹನ ತಪಾಣಾ ಸ್ಕ್ಯಾನರ್‌ಗಳು, ಸಿಸಿಟಿವಿಗಳು ಮತ್ತು ಮೆಟಲ್ ಡಿಟೆಕ್ಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದರು.

ತುಮಕೂರಿನ ಮಾರ್ಗವಾಗಿ ಹುಬ್ಬಳ್ಳಿ, ಬೆಳಗಾವಿಯ ಗಡಿಭಾಗಕ್ಕೆ ಮಾದಕ ವಸ್ತುಗಳ ಸಾಗಾಣಿಕೆ, ಮಾನವ ಕಳ್ಳ ಸಾಗಾಣಿಕೆಯ ನಡೆಯುತ್ತಿದೆ ಎಂದು ಸಾಕಷ್ಟು ದೂರುಗಳು ಬಂದಿವೆ. ಇದರ ಹಿನ್ನಲೆಯಲ್ಲಿ ಈಗ ಇಲಾಖೆ ಸಾಕಷ್ಟು ಕಠಿಣ ಕ್ರಮ ಕೈಗೊಂಡಿದೆ. ಈಗ ತುಮಕೂರು ಸೇರಿದಂತೆ ಇತರೆ ಹತ್ತು ನಿಲ್ದಾಣಗಳಲ್ಲಿ ಸಿಸಿಟಿವಿಗಳನ್ನೂ ಅಳವಡಿಸಲು ಯೋಚಿಸಲಾಗಿದೆ. ತುಮಕೂರಿಗೆ 54 ಸಿಸಿ ಟಿವಿಗಳು ಬರಲಿವೆ.ರೈಲು ನಿಲ್ದಾಣ ಮತ್ತು ರೈಲಿನಲ್ಲಿ ಡ್ರಗ್ಸ್ ಸರಬರಾಜು ಬಗ್ಗೆ ತೀವ್ರ ನಿಗಾ ಇಡಲಾಗುವುದು ಎಂದು ಡಿಐಜಿ ತಿಳಿಸಿದರು.

ತುಮಕೂರು,ಬೆಂಗಳೂರಿನ ನಡುವೆ ದಿನ ನಿತ್ಯ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುವುದರಿಂದ ಕಳ್ಳಕಾಕರು ಪ್ರಯಾಣಿಕರ ಲಗೇಜ್ ಕಳವು ಮಾಡುವುದು, ಪಿಕ್ ಪಾಕೇಟ್ ಮಾಡುವುದರ ಬಗ್ಗೆ ನಮ್ಮ ಸಿಬ್ಬಂದಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಭದ್ರತೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News