ಕಾಶ್ಮೀರ-ಛತ್ತೀಸ್‌ಗಡ: ಅಪ್ರಬುದ್ಧ ನೀತಿಯ ಫಲಗಳು

Update: 2017-04-25 19:01 GMT

‘‘ನೋಟು ನಿಷೇಧದಿಂದ ನಕ್ಸಲರು ಶರಣಾಗುತ್ತಿದ್ದಾರೆ.... ನೋಟು ನಿಷೇಧದಿಂದ ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಂತಿದೆ’’ ತಮ್ಮ ಬೇಜವಾಬ್ದಾರಿಯುತ ನೋಟು ನಿಷೇಧದ ದುಷ್ಪರಿಣಾಮಗಳನ್ನು ಮುಚ್ಚಿ ಹಾಕಲು ಮಾಧ್ಯಮಗಳ ಮೂಲಕ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದವರನ್ನು ವ್ಯಂಗ್ಯ ಮಾಡುವಂತಿದೆ ಕಾಶ್ಮೀರ ಮತ್ತು ಈಶಾನ್ಯ ಭಾರತದ ಹದಗೆಟ್ಟ ಪರಿಸ್ಥಿತಿ.

ಕಾಶ್ಮೀರ, ಈಶಾನ್ಯ ಭಾರತದಲ್ಲಿ ಹೇರಿರುವ ಕರ್ಫ್ಯೂವನ್ನು ಹಿಂದೆಗೆಯುವುದಕ್ಕಾಗಿ ಇಡೀ ದೇಶದ ಮೇಲೆ ಅಘೋಷಿತ ಆರ್ಥಿಕ ಕರ್ಫ್ಯೂ ಹಾಕಿದ ಮುತ್ಸದ್ದಿಗಳು ಇಂದಿನ ಬೆಳವಣಿಗೆಗಳಿಗೆ ನೇರ ಕಾರಣರು. ‘‘ಐನೂರು ರೂಪಾಯಿಯ ಕೂಲಿಗಾಗಿ ಕಾಶ್ಮೀರದ ಯುವಕರು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ’’ ಎಂಬ ನಮ್ಮ ನಾಯಕರ ಹೇಳಿಕೆಗಳೇ ಕಾಶ್ಮೀರ ಸಮಸ್ಯೆಯನ್ನು ಅವರು ಎಷ್ಟು ತೆಳುವಾಗಿ ಅರ್ಥೈಸಿಕೊಂಡಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕಾಶ್ಮೀರದಲ್ಲಿ ಒಂದು ವರ್ಷದ ಹಿಂದೆ ಪರಿಸ್ಥಿತಿ ಇಷ್ಟು ಕೆಟ್ಟಿರಲಿಲ್ಲ. ಯುಪಿಎ ಸರಕಾರ ಅಲ್ಲಿನ ಹಿಂಸಾಚಾರವನ್ನು ತಹಬದಿಗೆ ತರುವಲ್ಲಿ ಭಾಗಶಃ ಯಶಸ್ವಿಯಾಗಿತ್ತು. ಮುಂದೆ ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಜಂಟಿಯಾಗಿ ಸರಕಾರ ನಡೆಸಲು ಹೊರಟಾಗ ಇನ್ನಷ್ಟು ಧನಾತ್ಮಕ ಫಲಿತಾಂಶವನ್ನು ದೇಶ ನಿರೀಕ್ಷಿಸಿತ್ತು.

ಭಾರತದ ಮನಸ್ಸನ್ನು ಪ್ರತಿನಿಧಿಸಲು ಬಿಜೆಪಿ ಸರಕಾರ ಮತ್ತು ಕಾಶ್ಮೀರಿಗಳ ಮನಸ್ಸನ್ನು ಪ್ರತಿನಿಧಿಸಲು ಪಿಡಿಪಿ ಸರಕಾರ ಯಶಸ್ವಿಯಾಗಬಹುದು ಮತ್ತು ನೂತನ ಕಾಶ್ಮೀರ ಸರಕಾರ ಗಗ್ಗಂಟಾಗಿರುವ ಕಾಶ್ಮೀರಿಗಳ ಸಮಸ್ಯೆಯನ್ನು ಬಿಡಿಸಲು ಯಶಸ್ವಿಯಾಗಬಹುದು ಎಂದು ಜನರು ನಂಬಿದ್ದರು. ಆದರೆ ಕೇಂದ್ರ ಸರಕಾರ ಸೇನೆಯ ಮೂಲಕ ಕಾಶ್ಮೀರದಲ್ಲಿ ನಡೆಸಿದ ಅನಾಹುತಗಳು ಜನರನ್ನು ಮತ್ತೆ ಕೆರಳಿಸಿತು. ಇದೇ ಸಂದರ್ಭದಲ್ಲಿ ಸಂಘಪರಿವಾರವೂ ಕಾಶ್ಮೀರ ಸಮಸ್ಯೆಯಲ್ಲಿ ನೇರ ಮೂಗು ತೂರಿಸಲು ಆರಂಭಿಸಿತು. ಜಮ್ಮುವಿನಲ್ಲಿ ಗೋರಕ್ಷಕ ಪಡೆಗಳು ನಡೆಸಿದ ದೌರ್ಜನ್ಯಗಳು, ಸಂಘಪರಿವಾರ ಮುಖಂಡರ ಪ್ರಚೋದನಕಾರಿ ಹೇಳಿಕೆಗಳು, ಸೇನೆಯ ವಿಶೇಷಾಧಿಕಾರದ ಕುರಿತಂತೆ ಕೇಂದ್ರ ಸರಕಾರದ ಸರ್ವಾಧಿಕಾರಿ ನಿಲುವು ಕಾಶ್ಮೀರಿಗಳನ್ನು ಇನ್ನಷ್ಟು ಹತಾಶೆಗೆ ತಳ್ಳಿದವು.

ಇದೇ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಘೋಷಿಸಿದ ಅವಸರದ ಯೋಜನೆಗಳೂ ಕಾಶ್ಮೀರಿಗಳಲ್ಲಿ ಸರಕಾರದ ಕುರಿತಂತೆ ತಪ್ಪು ಅಭಿಪ್ರಾಯಗಳನ್ನು ಬೀರಿತು. ‘ಹಿಂದೂ ಮೊದಲು’ ಎನ್ನುವ ಬಿಜೆಪಿ ಮತ್ತು ಸಂಘಪರಿವಾರದ ಘೋಷಣೆ ಕಾಶ್ಮೀರದ ತಿಳಿಯಾಗುತ್ತಿದ್ದ ಕೊಳವನ್ನು ರಾಡಿಗೊಳಿಸಿತು. ಉಗ್ರಗಾಮಿಗಳ ಬಂಧನದ ಹೆಸರಲ್ಲಿ ನೇರವಾಗಿ ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿರುವುದು, ಸೇನೆಯಿಂದ ಅಮಾಯಕ ಯುವಕರ ಕಗ್ಗೊಲೆಗಳೇ ಜನರನ್ನು ಬೀದಿಗಿಳಿಯುವಂತೆ ಮಾಡಿತು.

ಪ್ರತಿಭಟನೆಗೆ ಇಳಿದ ಶ್ರೀಸಾಮಾನ್ಯರ ವಿರುದ್ಧ ಪೆಲೆಟ್ ಗನ್‌ನ್ನು ಬಳಸಿ ಹಲವು ಯುವಕ, ಯುವತಿಯರ ಭವಿಷ್ಯವನ್ನೇ ಸೇನೆ ಛಿದ್ರಗೊಳಿಸಿತು. ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾಶ್ಮೀರಿಗಳನ್ನ್ನು ಭಯೋತ್ಪಾದಕಂತೆ ಕಂಡು, ಅವರನ್ನು ಮಟ್ಟ ಹಾಕಲು ಯತ್ನಿಸಿದ್ದು, ಕೇಂದ್ರದ ಪ್ರಜಾಸತ್ತೆಯ ಸೋಗಲಾಡಿತನವನ್ನು ಬಯಲು ಮಾಡಿತು. ಆರ್ಥಿಕವಾಗಿ ಜನರನ್ನು ಸಂಕಷ್ಟಕ್ಕೆ ಕೆಡವಿ, ಬಳಿಕ ಮಿಲಿಟರಿ ಶಕ್ತಿಯ ಮೂಲಕ ಕಾಶ್ಮೀರಿಗಳನ್ನು ತಮ್ಮ ಮೂಗಿನ ನೇರಕ್ಕೆ ತಂದು ನಿಲ್ಲಿಸಬಹುದು ಎಂಬ ಕೇಂದ್ರ ಸರಕಾರದ ಅವಿವೇಕಿ ಯೋಜನೆ, ಇಂದು ಕಾಶ್ಮೀರ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ಬರೇ ಪಾಕಿಸ್ತಾನವನ್ನು ಹೊಣೆ ಮಾಡುವ ಮೂಲಕ ಕಾಶ್ಮೀರ ಸಮಸ್ಯೆಯಿಂದ ಸರಕಾರ ಹೆಗಲು ಜಾರಿಸುವಂತಿಲ್ಲ. ಕಾಶ್ಮೀರ ಬಹಳ ಸೂಕ್ಷ್ಮವಾದ ವಿವಾದ. ಅದು ಕೇವಲ ಪ್ರತ್ಯೇಕತಾವಾದಿಗಳ ಅಥವಾ ಮತಾಂಧರ ಸಂಚಿನಿಂದ ಸೃಷ್ಟಿಗೊಂಡ ವಿವಾದವೇ ಆಗಿದ್ದರೆ ಸಮಸ್ಯೆ ಪರಿಹಾರ ಇಷ್ಟು ಜಟಿಲವಾಗುತ್ತಿರಲಿಲ್ಲ. ಕಾಶ್ಮೀರಕ್ಕೆ ಒಂದು ಇತಿಹಾಸವಿದೆ. ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಮಾಡಲು ಹೊರಡುವ ನಾಯಕರು, ಸ್ವಾತಂತ್ರಾನಂತರದ ಬೆಳವಣಿಗೆಗಳನ್ನು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ.

ಅಟಲ್ ಬಿಹಾರಿವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ಕಾಶ್ಮೀರದ ಕುರಿತಂತೆ ಕೆಲವು ಮಧ್ಯಮ ನೀತಿಗಳನ್ನು ತಳೆಯುವಲ್ಲಿ, ಆ ಮೂಲಕ ಕಾಶ್ಮೀರಿಗಳ ಮನಗೆಲ್ಲುವಲ್ಲಿ ಭಾಗಶಃ ಯಶಸ್ವಿಯಾಗಿದ್ದರು. ಪಾಕಿಸ್ತಾನ ಮತ್ತು ಬಾಂಗ್ಲಾ ಜೊತೆಗೂ ಅವರು ಬಾಂಧವ್ಯವನ್ನು ಉಳಿಸಲು ಕೊನೆಯವರೆಗೂ ಯತ್ನಿಸಿದ್ದರು. ಆದರೆ ಪಾಕ್ ಮತ್ತು ಭಾರತದೊಳಗಿರುವ ಉಗ್ರವಾದಿ ಚಟುವಟಿಕೆಗಳು ವಾಜಪೇಯಿ ಅವರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿತು. ಇದೀಗ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಅವರೂ ವಾಜಪೇಯಿ ನೀತಿಗಳನ್ನು ಮರು ಅನುಷ್ಠಾನಿಸುವ ಕುರಿತಂತೆ ಮೋದಿಯವರಲ್ಲಿ ಮನವಿ ಮಾಡಿದ್ದಾರೆ. ಮೊತ್ತ ಮೊದಲು ಕಾಶ್ಮೀರವೆಂದರೆ ಬರೇ ಭೌಗೋಳಿಕ ಗಡಿರೇಖೆಗಳಲ್ಲ ಎನ್ನುವುದನ್ನು ಕೇಂದ್ರ ಸರಕಾರ ಮನಗಾಣಬೇಕು.

ಕಾಶ್ಮೀರದ ಜನರನ್ನು ನಮ್ಮವರನ್ನಾಗಿಸದೇ ಕಾಶ್ಮೀರವನ್ನು ನಮ್ಮದಾಗಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾರರು ಭಾಗವಹಿಸುವ ಮೂಲಕ, ಕೇಂದ್ರದ ಜೊತೆಗಿನ ತಮ್ಮ ಅಸಮಾಧಾನವನ್ನು ಕಾಶ್ಮೀರಿಗಳು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಇದು ನಿಜಕ್ಕೂ ಬಹುದೊಡ್ಡ ಹಿನ್ನಡೆ. ಭಾರತದ ಈ ಸೋಲನ್ನು ದುರ್ಬಳಕೆ ಮಾಡಲು ಪಕ್ಕದಲ್ಲೇ ಪಾಕಿಸ್ತಾನ ಹೊಂಚು ಹಾಕಿ ಕಾಯುತ್ತಿದೆ ಎನ್ನುವುದನ್ನು ಕೇಂದ್ರ ಸರಕಾರ ಮರೆಯಬಾರದು.

ಇದೇ ಸಂದರ್ಭದಲ್ಲಿ ನೋಟು ನಿಷೇಧಕ್ಕೂ ನಕ್ಸಲ್ ನಿಯಂತ್ರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸಾಬೀತು ಮಾಡುವುದಕ್ಕೋ ಎಂಬಂತೆ ನಕ್ಸಲೀಯರಿಂದ ಸೇನೆಯ ವಿರುದ್ಧ ಬರ್ಬರ ದಾಳಿ ನಡೆದಿದೆ. ದಾಳಿ ನಡೆದ ಬೆನ್ನಿಗೇ ಎಂದಿನಂತೆಯೇ ‘ಸರಿಯಾದ ಪಾಠ ಕಲಿಸುತ್ತೇವೆ’ ಎಂಬ ಸೇಡಿನ ಹೇಳಿಕೆಯನ್ನು ಕೇಂದ್ರ ಸರಕಾರ ನೀಡಿದೆ. ಸಿಆರ್‌ಪಿಎಫ್ ಪಡೆ ಪ್ರತಿ ದಾಳಿ ನಡೆಸಿ ನಕ್ಸಲರನ್ನು ಬಲಿ ತೆಗೆದುಕೊಳ್ಳಲಿದೆ ಎನ್ನುವುದಷ್ಟೇ ಇದರರ್ಥ. ಸರಕಾರ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸೇಡು ಪ್ರತಿಸೇಡು ಇವುಗಳಲ್ಲಿ ಅಂತಿಮವಾಗಿ ಬಲಿಯಾಗುವುದು ತಳಸ್ತರದ ಯುವಕರೇ ಆಗಿದ್ದಾರೆ.

ನಕ್ಸಲೀಯರು ಹೊರಗಿನಿಂದ ಬಂದವರಲ್ಲ. ತಮ್ಮದೇ ನೆಲದಲ್ಲಿ ಪರಕೀಯರಾಗಿ ಕೋವಿ ಎತ್ತಿಕೊಂಡವರು ಅವರು. ಬಹುತೇಕ ಬುಡಕಟ್ಟು ಜನರು. ಸರಕಾರ ಮತ್ತು ಬೃಹತ್ ಉದ್ಯಮಿಗಳ ದಬ್ಬಾಳಿಕೆಯ ವಿರುದ್ಧ ದಂಗೆಯೆದ್ದು ಅನಿವಾರ್ಯವಾಗಿ ನಕ್ಸಲ್ ಹಣೆಪಟ್ಟಿ ಕಟ್ಟಿಕೊಂಡವರು. ಇತ್ತ ನಕ್ಸಲೀಯರಿಗೆ ಬಲಿಯಾಗುತ್ತಿರುವ ಸಿಆರ್‌ಪಿಎಫ್ ಪಡೆಯ ಯುವಕರೂ ತಳಸ್ತರದಿಂದ ಬಂದ ಬಡವರು. ಈ ಮಧ್ಯೆ ಸಲ್ವಾಜುಡುಂ ಹೆಸರಲ್ಲಿ ಸ್ಥಳೀಯ ಆದಿವಾಸಿಗಳನ್ನು ನಕ್ಸಲರ ವಿರುದ್ಧ ಎತ್ತಿಕಟ್ಟುವ ಪ್ರಯತ್ನವೂ ನಡೆಯಿತು.

ಒಟ್ಟಿನಲ್ಲಿ ಯಾರು ಯಾರ ಮೇಲೆ ದಾಳಿ ನಡೆಸಿದರೂ, ಅದರ ಬಲಿಪಶುಗಳು ಈ ನೆಲದ ಜನರೇ ಆಗಿದ್ದಾರೆ. ಇವೆಲ್ಲದರ ಫಲಾನುಭವಿಗಳು ಗಣಿಗಾರಿಕೆಯಿಂದ ಭೂಮಿಯನ್ನು ಬಗೆದು ಹಣ ದೋಚಲು ಹೊಂಚು ಹಾಕಿರುವ ಬೃಹತ್ ಕಂಪೆನಿಗಳು. ಹಿಂಸೆಗೆ ಪ್ರತಿ ಹಿಂಸೆ ಪ್ರಜಾಸತ್ತಾತ್ಮಕ ಪ್ರಭುತ್ವದ ನೀತಿಯಾಗಬಾರದು. ಸರಕಾರ ಮೊತ್ತ ಮೊದಲು ಈಶಾನ್ಯ ಭಾರತೀಯರು ಅಥವಾ ನಕ್ಸಲ್ ಪ್ರಭಾವಿತ ಪ್ರದೇಶದ ಜನರ ಬೇಡಿಕೆಗಳಿಗೆ ಕಿವಿಯಾಗಬೇಕು. ಪ್ರಜಾಸತ್ತಾತ್ಮಕವಾದ ದಾರಿಯಲ್ಲಿ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎನ್ನುವ ನಿಟ್ಟಿನಲ್ಲಿ, ನಕ್ಸಲೀಯರ ಸಮಸ್ಯೆಯ ಕುರಿತಂತೆ ತನ್ನ ನೀತಿಯನ್ನು ಸರಕಾರ ಬದಲಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News