ಯಡಿಯೂರಪ್ಪ ವಿರುದ್ಧ ತೊಡೆತಟ್ಟಲು ಮುಂದಾದ ಹಿರಿಯ ಕಾರ್ಯಕರ್ತರು

Update: 2017-04-26 07:31 GMT

ತುಮಕೂರು, ಎ.26: ರಾಜ್ಯದಲ್ಲಿ ಬಿಜೆಪಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎ.27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಹಳೆಯ ಮತ್ತು ನಿಷ್ಠಾವಂತ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಎಸ್.ಶಿವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಮಾವೇಶದಲ್ಲಿ ಬಿಜೆಪಿಯ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿರುವ 24 ನಾಯಕರ ಜೊತೆಗೆ ಕೆ.ಎಸ್.ಈಶ್ವರಪ್ಪಭಾಗವಹಿಸಲಿದ್ದಾರೆ. ಇದರ ಜೊತೆಗೆ ಕೋರ್ ಕಮಿಟಿ ಸದಸ್ಯರನ್ನು ಸಹ ಸಮಾವೇಷಕ್ಕೆ ಅಹ್ವಾನಿಸಲಾಗಿದೆ ಎಂದರು.

ಕಳೆದ ಒಂದು ವರ್ಷದ ಹಿಂದೆ ತಳಹಂತದ ಜಿಲ್ಲಾ ನಾಯಕರನ್ನು ನಿರ್ಲಕ್ಷಿಸಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ, ಕೆ.ಜೆ.ಪಿಯಲ್ಲಿದ್ದವರಿಗೆ ಮಣೆ ಹಾಕಿದರು. ಈ ಬಗ್ಗೆ ನಮ್ಮ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಕೋರ್ ಕಮಿಟಿ ರಚಿಸಲಾಯಿತು. ಅದರೆ ಕೋರ್ ಕಮಿಟಿಯಲ್ಲಿ ಸಮಸ್ಯೆ ಬಗೆಹರಿಯಲಿಲ್ಲ. ಹಾಗಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ದೂರು ನೀಡಿದ ಮೇಲೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂತೋಷ್ ಜಿ. ಮತ್ತು ಮುರಳೀಧರ್ ರಾವ್ ಅವರನ್ನು ಒಳಗೊಂಡ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದ್ದರು.ವರದಿ ನೀಡಿದ ನಂತರವೂ ಜಿಲ್ಲಾಧ್ಯಕ್ಷರ ಬದಲಾವಣೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತೊಮ್ಮೆ ರಾಷ್ಟ್ರಾಧ್ಯಕ್ಷರ ಗಮನ ಸೆಳೆಯಲು ಎ.27ರಂದು ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ನಮ್ಮ ನಡೆಯಲಿದ್ದೇವೆ ಎಂದು ಶಿವಣ್ಣ ತಿಳಿಸಿದರು.

ಉಪಚುನಾವಣೆ ಸೋಲಿಗೆ ಬಿ.ಎಸ್.ವೈ ಕಾರಣ:
ಚಾಮರಾಜನಗರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿಗೆ ಯಡಿಯೂರಪ್ಪ ನೇರ ಕಾರಣ. ಈ ಹಿಂದೆ ಪ್ರಹ್ಲಾದ್ ಜೋಷಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ದೇವದುರ್ಗ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಈಗ ಸಾಧ್ಯವಾಗಲಿಲ್ಲವೆಂದರೆ, ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ವಿಶ್ವಾಸ ಗಳಿಸುವಲ್ಲಿ ಬಿ.ಎಸ್.ವೈ ಎಡವಿದ್ದಾರೆ ಎಂದೇ ಅರ್ಥ. ಕಳೆದ ಒಂದು ವರ್ಷದಿಂದ ನಿಷ್ಠಾವಂತ ಕಾರ್ಯಕರ್ತರು ಕೆಲ ಜಿಲ್ಲೆಗಳ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರೂ ಗಮನಹರಿಸಿಲ್ಲ. ನಾಮಕಾವಸ್ಥೆಗೆ ಕೆಲ ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಆದರೆ ನಿಷ್ಠಾವಂತರು ನೀಡಿದ 12 ಜಿಲ್ಲೆಗಳ ಪಟ್ಟಿಯಲ್ಲಿ ಆ ಜಿಲ್ಲೆಗಳು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಪ್ಪ-ಮಗ ಬದಲಾವಣೆಯಾಗಬೇಕು:
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಕೆ.ಜೆ.ಪಿ.ಗೆ, ಅಲ್ಲಿಂದ ಬಿಜೆಪಿಗೆ ಬಂದ ಅಪ್ಪ ಮಗನಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ತುರ್ತುಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಈ ವಿಚಾರವಾಗಿ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಯುಕ್ತಿಕವಾಗಿ ಬಿ.ಎಸ್.ವೈ ಬಗ್ಗೆ ಅಸಮಾಧಾನವಿಲ್ಲ. ಆದರೆ ಅವರು ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಬಹಳ ನೋವಿದೆ. ಆ ನೋವು ಜ್ವಾಲಾಮುಖಿಯಾಗಿ ಪಕ್ಷವನ್ನು ಬಲಿ ತೆಗೆದುಕೊಳ್ಳುವ ಮೊದಲು ಪಕ್ಷದ ನಾಯಕರು ಎಚ್ಚೆತ್ತುಕೊಳ್ಳ ಬೇಕು ಎಂಬ ಉದ್ದೇಶದಿಂದ ಸಮಾವೇಶ ನಡೆಸುತ್ತಿದ್ದೇವೆ. ಇದು ಯಾರ ವಿರುದ್ಧವು ಅಲ್ಲ. ಪಕ್ಷದ ನಿಷ್ಠಾವಂತ ಕಾರ್ಯ ಕರ್ತರನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಎಂದು ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತರಾದ ಆರ್.ಕಾಮರಾಜು, ಕೆ.ಪಿ.ಮಹೇಶ್, ನಂಜೇಶ್, ನಂಜುಂಡ, ಅಂಬರೀಷ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News