ಎ.29ಕ್ಕೆ ರಾಷ್ಟ್ರಮಟ್ಟದಲ್ಲಿ ‘ಬಸವ ಜಯಂತಿ’
ಬೆಂಗಳೂರು, ಎ.26: ಬಸವ ಜಯಂತಿ ಆಚರಣೆ ಎ.29ರಂದು ರಾಷ್ಟ್ರಮಟ್ಟದಲ್ಲಿ ನಡೆಯಲಿದ್ದು, ಇದೇ ವೇಳೆ ಬಸವ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಉರ್ದು ಸೇರಿ 23 ಭಾಷೆಗಳಿಗೆ ಅನುವಾದಿಸಿರುವ ‘ವಚನ ಸಂಪುಟ’ವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಬುಧವಾರ ನಗರದ ಬಸವ ಸಮಿತಿ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ, ಎ.29 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ 173 ಬಸವಾದಿ ಶರಣರ ಆಯ್ದ 2500 ವಚನಗಳನ್ನು 23 ಭಾಷೆಗಳಲ್ಲಿ ಅನುವಾದಿಸಿರುವ ‘ವಚನ ಸಂಪುಟ’ವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಕೊಂಕಣಿ, ಮೈಥಿಲಿ, ಕಾಶ್ಮೀರಿ, ಓರಿಯಾ, ಸಂತಾಲಿ, ತುಳು, ಭೋಜ್‌ಪುರಿ, ಕೊಡವ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿ ದೇಶದ 23 ಭಾಷೆಗಳಲ್ಲಿ ಬಸವಾದಿ ಶರಣರ ವಚನಗಳನ್ನು ಅನುವಾದಿಸಲಾಗಿದೆ ಎಂದ ಅವರು, ಇದೇ ಉದ್ದೇಶಕ್ಕಾಗಿ 10 ವರ್ಷಗಳ ಹಿಂದೆ ಹೆಸರಾಂತ ಸಾಹಿತಿ, ವಿಚಾರವಾದಿ, ಸಂಶೋಧಕ ನಾಡೋಜ ದಿ.ಡಾ.ಎಂ.ಎಂ. ಕಲ್ಬುರ್ಗಿ ಅವರ ನಾಯಕತ್ವದಲ್ಲಿ ಬಹುಭಾಷಾ ವಚನ ಅನುವಾದ ಯೋಜನೆಗೆ ಚಾಲನೆ ನೀಡಲಾಗಿತ್ತು. ಅದರ ಉದ್ದೇಶ ಇದೀಗ ಈಡೇರಿದೆ. ಇದರಲ್ಲಿ 200 ಜನ ರಾಷ್ಟ್ರದ ಪ್ರಜ್ಞಾವಂತ ಅನುವಾದಕರು ಮತ್ತು ಸಂಪಾದಕರು ಕಾರ್ಯನಿರ್ವಹಿಸಿದ್ದಾರೆ ಎಂದು ಶಿವರುದ್ರಸ್ವಾಮೀಜಿ ತಿಳಿಸಿದರು.
ಶರಣರ ವಚನಗಳ ಅನುವಾದ ಯೋಜನೆಗೆ ರಾಜ್ಯ ಸರಕಾರ 1 ಕೋಟಿ ರೂ. ಬಿಡುಗಡೆ ಮಾಡಿತ್ತು. ಒಟ್ಟಾರೆ ಯೋಜನೆಗೆ ಎರಡೂವರೆ ಕೋಟಿ ಖರ್ಚಾಗಿದೆ. ಎರಡನೆ ಹಂತವಾಗಿ ರಾಷ್ಟ್ರೀಯ ಬಸವ ಸಮಾವೇಶ ಮತ್ತು ವಿಶ್ವ ಬಸವ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ 23 ಭಾಷೆಗಳ ಎಲ್ಲ ಸಂಪಾದಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿದೇಶಿ ಭಾಷೆಗಳಿಗೂ ಅನುವಾದ: ಬಸವಣ್ಣ ಅವರ ಜಾತ್ಯತೀತ, ಕಾಲಾತೀತ ದರ್ಶನಗಳಾದ ವಚನಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಬಸವ ಸಮಿತಿಯೂ ಫ್ರೆಂಚ್, ಅರೆಬಿಕ್ ಸೇರಿದಂತೆ ವಿವಿಧ ರಾಷ್ಟ್ರಗಳ ಭಾಷೆಗಳಲ್ಲೂ ಅನುವಾದ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದರು.
ಬಸವ ಜಯಂತಿ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ರಾಜ್ಯ ಮುಖ್ಯಮಂತ್ರಿಗಳ ಪರವಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಂಸದ ಐ.ಸಿ.ಸನದಿ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
‘ಸರಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ’
ಬೆಂಗಳೂರು, ಎ.26: ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವ ಸಂಬಂಧ ಇಂದೇ ಸುತ್ತೋಲೆ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್‌ಚಂದ್ರ ಕುಂಟಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.