ಹತ್ಯೆಗೀಡಾದ ತಾಯಿಯ ಬಳಿ ರಾತ್ರಿಯಿಡೀ ಕಳೆದ ಬಾಲಕಿ!
ಶಿವಮೊಗ್ಗ, ಎ.25: ತನ್ನ ತಾಯಿ ಹತ್ಯೆಗೀಡಾಗಿರುವ ಬಗ್ಗೆ ತಿಳಿಯದ 3 ವರ್ಷದ ಮುಗ್ದ ಬಾಲಕಿಯೋರ್ವಳು ರಾತ್ರಿಯಿಡೀ ಶವದ ಬಳಿ ಕೂತ ಮನಕಲಕುವ ಘಟನೆ ನಗರದ ಹೊರವಲಯ ಹರಿಗೆ ಬಡಾವಣೆ ಸಮೀಪದ ಹಾತಿ ನಗರದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಮುಂಜಾನೆ ಹತ್ಯೆಗೀಡಾದ ಮಹಿಳೆಯ ಬಳಿ ಬಾಲಕಿ ಕುಳಿತುಕೊಂಡಿರುವುದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದಾರೆ. ತಕ್ಷಣವೇ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದು, ಸ್ಥಳಕ್ಕಾಗಮಿಸಿದ ತುಂಗಾ ನಗರ ಠಾಣೆ ಪೊಲೀಸರು ಬಾಲಕಿಯನ್ನು ಉಪಚರಿಸಿದ್ದಾರೆ. ತದನಂತರ ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ನಿಗೂಢ: ಮಹಿಳೆಯ ಕತ್ತು ಸೀಳಿ, ಹೊಟ್ಟೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೀಡಾದ ಮಹಿಳೆ ಸರಿಸುಮಾರು 20 ರಿಂದ 23 ವರ್ಷದವರಾಗಿದ್ದು, ಹೆಸರು, ವಿಳಾಸ ಸೇರಿದಂತೆ ಇತರೆ ವಿವರಗಳು ಲಭ್ಯವಾಗಿಲ್ಲ. ಪೊಲೀಸರ ರಕ್ಷಣೆಯಲ್ಲಿರುವ ಬಾಲಕಿಯು "ಅಪ್ಪ, ಅಮ್ಮ" ಎಂದಷ್ಟೆ ಹೇಳುತ್ತಿದ್ದಾಳೆ. "ಅಪ್ಪ ಬಂದಿದ್ದರು" ಎನ್ನುತ್ತಿದ್ದಾಳೆ. ಇದರಿಂದ ಪತಿಯ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯ ಒಂದು ಕೈಯಲ್ಲಿ ನಾಗರಾಜ, ಯಲ್ಲವ್ವ ಹಾಗೂ ಮತ್ತೊಂದು ಕೈಯಲ್ಲಿ ಹೆಮ್ಮೂರು ರವಿ ಎಂಬ ಹಚ್ಚೆಯಿದೆ. ಇದು ಹೊರತುಪಡಿಸಿದರೆ ಮಹಿಳೆಯ ಪೂರ್ವಾಪರಗಳ ಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಇನ್ಸ್‌ಪೆಕ್ಟರ್ ಗಂಗಾಧರಪ್ಪ, ಸಬ್ ಇನ್ಸ್‌ಪೆಕ್ಟರ್ ಗಿರೀಶ್‌ರವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಗೂಢವಾಗಿರುವ ಪ್ರಕರಣ ಬೇಧಿಸಲು ಸಬ್ ಇನ್ಸ್‌ಪೆಕ್ಟರ್ ಗಿರೀಶ್ ನೇತೃತ್ವದ ತಂಡವು ಕಾರ್ಯೋನ್ಮುಖವಾಗಿದ್ದು, ಮಾಹಿತಿ ಕಲೆಹಾಕುವ ಕಾರ್ಯ ಆರಂಭಿಸಿದೆ.