ವಿಭಿನ್ನ ಐಡಿಯಾ ಬಳಸಿ ಚಿದಂಬರಂ ಸಂಬಂಧಿಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು
ಮಡಿಕೇರಿ, ಎ.26: ಮದುವೆ ಕಾರ್ಯಕ್ರಮದಂತೆ ಕಾರುಗಳನ್ನು ಅಲಂಕರಿಸಿ ನಗರಕ್ಕೆ ಆಗಮಿಸಿದ ಆದಾಯ ತೆರಿಗೆ ನಿಗ್ರಹ ದಳ ತಂಡ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರ ಸಹೋದರಿಯ ಮಕ್ಕಳ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.
ಅಂದಾಜು 50ಕ್ಕೂ ಅಧಿಕ ವಾಹನಗಳಲ್ಲಿದ್ದ ಅಧಿಕಾರಿಗಳ ತಂಡ ವಿವಾಹಕ್ಕೆ ಆಗಮಿಸುವ ರೀತಿಯಲ್ಲಿ ಕಾರುಗಳನ್ನು ಅಲಂಕರಿಸಿ ಮೈಸೂರಿನಿಂದ ಕುಶಾಲನಗರಕ್ಕೆ ಆಗಮಿಸಿತು. ಮದುವೆ ಮೆರವಣಿಗೆ ಎಂದು ಪ್ರತಿಬಿಂಬಿತವಾಗಿದ್ದ ಕಾರಿನಲ್ಲಿ ಧೀರಜ್ ಮತ್ತು ಕಾಜಲ್ ಎಂಬ ಹೆಸರಿನ ಪೋಸ್ಟರ್‌ಗಳು ಹಾಗೂ ಹೂವುಗಳ ಬೊಕ್ಕೆಗಳನ್ನು ಇಡಲಾಗಿತ್ತು.
ಮೈಸೂರು ಪೊಲೀಸರ ಸಹಕಾರದೊಂದಿಗೆ ಕುಶಾಲನಗರದ ಪ್ರತಿಷ್ಠಿತ ಎಸ್‌ಎಲ್‌ಎನ್ ಗ್ರೂಪ್ ಸಂಸ್ಥೆಗೆ ಸೇರಿದ ಸುಮಾರು 11 ಶಾಖೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿತು. ಕೈಗಾರಿಕಾ ಬಡಾವಣೆಯಲ್ಲಿರುವ ಕಾಫಿ ಸಂಸ್ಕರಣಾ ಘಟಕ ಮತ್ತು ಕಾಫಿ ಇನ್ಸ್‌ಸ್ಟೆಂಟ್ ಘಟಕದ ಕಚೇರಿಗಳ ಮೇಲೆ, ಮಂಗಳೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟಿಂಬರ್, ಪೆಟ್ರೋಲ್ ಬಂಕ್, ಐಶಾರಾಮಿ ಹೋಟೇಲ್ ಮತ್ತು ಎಸ್‌ಎಲ್‌ಎನ್ ಗ್ರೂಪ್‌ನ ಮಾಲಕ ವಿಶ್ವನಾಥನ್ ಮತ್ತು ಸಾತಪ್ಪನ್ ನಿವಾಸಗಳ ಮೇಲೆಯೂ ದಾಳಿ ನಡೆಯಿತು.
ಸುಮಾರು ಮೂರು ಗಂಟೆಗಳ ಕಾಲ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದ ಕಾರಣ ಪೆಟ್ರೋಲ್ ಬಂಕ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅದೇ ರೀತಿ ಕೂಡ್ಲೂರು ಕೈಗಾರಿಕಾ ವಲಯದಲ್ಲಿರುವ ಎಸ್‌ಎಲ್‌ಎನ್ ಕಾಫಿ ಸಂಸ್ಕರಣಾ ಘಟಕ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಐಟಿ ಅಧಿಕಾರಿಗಳು ಸೂಚಿಸಿದರು.
ಪೂರ್ವಯೋಜಿತ ದಾಳಿ: ಈ ದಾಳಿಯನ್ನು ಪೂರ್ವಯೋಜಿತವಾಗಿ, ವ್ಯವಸ್ಥಿತವಾಗಿ ಕಾರ್ಯತಂತ್ರವನ್ನು ರೂಪಿಸಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಚೆನ್ನೈನಲ್ಲಿ ಕೇಂದ್ರ ಮಾಜಿ ಅರ್ಥ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿಕ್ ಚಿದಂಬರಂ ಮನೆಯ ಮೇಲೆಯೂ ಐಟಿ ದಾಳಿ ನಡೆದಿತ್ತು. ಅಲ್ಲಿ ದೊರೆತ ಕೆಲವು ದಾಖಲೆಗಳ ಆಧಾರದ ಮೇಲೆ ಚಿದಂಬರಂ ಅವರ ಸಹೋದರಿಯ ಮಕ್ಕಳಾದ ವಿಶ್ವನಾಥನ್ ಮತ್ತು ಸಾತಪ್ಪನ್ ಅವರ ಸಂಸ್ಥೆಗಳ ಮೇಲೂ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.