ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಕಲ್ಲುದೊಡ್ಡಿ ನಿವಾಸಿಗಳಿಂದ ನಗರಸಭೆಗೆ ಮನವಿ
ಚಿಕ್ಕಮಗಳೂರು, ಎ.26: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 32ರ ಶಾಂತಿನಗರ ಕಲ್ಲುದೊಡ್ಡಿ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಕಲ್ಲುದೊಡ್ಡಿಯ ವಿವೇಕಾನಂದ ಯುವಕ ಸಂಘದ ನೇತೃತ್ವದಲ್ಲಿ ಸ್ಥಳೀಯರು ನಗರಸಭೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಕಲ್ಲುದೊಡ್ಡಿ ಬಡಾವಣೆಯು 20 ವರ್ಷಗಳ ಹಿಂದೆಯೇ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಈಗಾಗಲೇ 4 ಮಂದಿ ನಗರಸಭೆ ಸದಸ್ಯರು 32ನೇ ವಾರ್ಡನ್ನು ಪ್ರತಿನಿಧಿಸಿದ್ದಾರೆ. ಆದರೆ ಈತನಕ ಯಾವುದೇ ಜನಪ್ರತಿನಿಧಿಗಳೂ ಇಲ್ಲಿನ ಸಮಸ್ಯೆಯನ್ನು ಪರಿಹರಿಸಲು ಕಾಳಜಿ ವಹಿಸಿಲ್ಲ. ಇಲ್ಲಿನ ಜನರಿಗೆ ತಿಂಗಳಿಗೊಮ್ಮೆ ನೀರು ಬರುತ್ತಿದ್ದು, ವಾರದಲ್ಲಿ ಎರಡು ದಿನವಾದರೂ ಕುಡಿಯುವ ನೀರು ಪೂರೈಕೆ ಮಾಡಬೇಕು. ಇಲ್ಲಿನ ಕೊಳವೆ ಬಾವಿ ದುರಸ್ಥಿಯಾಗದೇ ಆರು ತಿಂಗಳು ಕಳೆದಿದೆ. ಬೀದಿದೀಪ ಹಾಳಾಗಿ ಹಲವು ತಿಂಗಳುಗಳು ಕಳೆದಿವೆ. ರಾತ್ರಿ ವೇಳೆ ಹೆಂಗಸರು, ಮಕ್ಕಳು ಹಾದಿ ಬೀದಿಯಲ್ಲಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಆದ್ದರಿಂದ ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕ್ರಮ ಜರಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.