×
Ad

ಬಿಜೆಪಿಯನ್ನು ಕಟ್ಟಿಹಾಕಿದ ನಂಜನಗೂಡು- ಗುಂಡ್ಲುಪೇಟೆ ಕ್ಷೇತ್ರದ ಮತದಾರರು: ಸಿದ್ದರಾಮಯ್ಯ

Update: 2017-04-26 23:03 IST

ಗುಂಡ್ಲುಪೇಟೆ, ಎ.26: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿಯವರನ್ನು ಕಟ್ಟಿ ಹಾಕುವ ಕೆಲಸವನ್ನು ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಮತದಾರರು ಮತ್ತು ಕಾರ್ಯಕರ್ತರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಮ್ಮದು ‘ಮಿಷನ್ 150’. ಉಪ ಚುನಾವಣೆಯಲ್ಲಿ ನಾವು ಗೆದ್ದಾಗಿದೆ. ಇನ್ನು ಫಲಿತಾಂಶ ಬರುವುದೊಂದೇ ಬಾಕಿ. ಗೆಲುವಿನ ಮತಗಳ ಅಂತರವನ್ನು ಲೆಕ್ಕ ಮಾಡುತ್ತಿದ್ದೇವೆ" ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಯಡಿಯೂರಪ್ಪ "ಸಿಎಂ ಆಗಬೇಕಾದರೆ ಉಪ ಚುನಾವಣೆಯಲ್ಲಿ ಗೆಲ್ಲಬೇಕು. ಗೆದ್ದೇ ಗೆಲ್ಲುತ್ತೇವೆ. ನಾನು 2018ರಲ್ಲಿ ಮುಖ್ಯಮಂತ್ರಿ ಆಗುತ್ತೇನೆ" ಎನ್ನುತ್ತಿದ್ದರು. ನಾವು ನಾಲ್ಕು ವರ್ಷಗಳಿಂದ ಜನಪರವಾದ ಕೆಲಸಗಳನ್ನು ಮಾಡುತ್ತಿದ್ದೇವೆ. ಅದಕ್ಕೆ ಕೂಲಿ ಕೊಡಿ ಎಂದಷ್ಟೇ ಕೇಳುತ್ತಿದ್ದೆವು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಹದೇವಪ್ರಸಾದ್ ಐದು ಬಾರಿ ಗೆದ್ದಿದ್ದರು. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಬಿಜೆಪಿ ಯಾವತ್ತೂ ಇಲ್ಲಿ ಗೆದ್ದಿಲ್ಲ. ಮುಂದೆ ಗೆಲ್ಲುವುದೂ ಇಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಚುನಾವಣಾ ಕಣದಲ್ಲಿ ಬಿಜೆಪಿ ಎಂದೂ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಯಡಿಯೂರಪ್ಪ ಅವರು ಯಾವಾಗಲೂ ಜಾತಿ, ಧರ್ಮದ ವಿಚಾರವನ್ನೇ ಪ್ರಸ್ತಾಪ ಮಾಡುತ್ತಿದ್ದರು. ಜಾತಿ, ಧರ್ಮದ ಹೆಸರೇಳಿಕೊಂಡು ಅಲ್ಲಿ ಜಯಗಳಿಸಿದಂತೆ ಇಲ್ಲಿ ಗೆಲ್ಲಲು ಆಗುವುದಿಲ್ಲ. ಕರ್ನಾಟಕ ಶರಣರು, ಸಾಧು ಸಂತರು ಮತ್ತು ಸೂಫಿಗಳ ನಾಡು ಎಂದರು.

ಫಲಿತಾಂಶ ಬಂದ ಬಳಿಕ ಯಡಿಯೂರಪ್ಪಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಗೆದ್ದಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಹಣ ಕೊಟ್ಟು ಮತ ಖರೀದಿ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿನ ಗೆಲುವು ಮತದಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್, ಎಚ್.ಆಂಜನೇಯ, ಸತೀಶ್ ಜಾರಕಿಹೊಳಿ, ವಿನಯ ಕುಲಕರ್ಣಿ, ಸಂಸದ ಧ್ರುವನಾರಾಯಣ, ಶಾಸಕಿ ಗೀತಾ ಮಹದೇವ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News