ಹುಲಿ ಗಣತಿ ಬಳಿಕ ಆನೆ ಗಣತಿಗೆ ಸಿದ್ಧವಾದ ಅರಣ್ಯ ಇಲಾಖೆ
ಚಿಕ್ಕಮಗಳೂರು, ಎ.26: ಹುಲಿ ಗಣತಿ ಕಾರ್ಯವನ್ನು ಮುಗಿಸಿರುವ ಅರಣ್ಯ ಇಲಾಖೆ ತನ್ನ ಮುಂದಿನ ಯೋಜನೆಯಲ್ಲಿ ಆನೆಗಳ ಗಣತಿ ಕೈಗೆತ್ತಿಕೊಳ್ಳಲು ಈಗಾಗಲೇ ಅಂತಿಮ ಹಂತದ ಪೂರ್ವ ಸಿದ್ಧತೆ ನಡೆಸಿದ್ದು, ಈಗಾಗಲೇ ಆನೆ ಗಣತಿಗೆ ವಿದ್ಯುಕ್ತವಾಗಿ ಚಾಲನೆ ದೊರಕಿದೆ.
ಮೇ 1ರಿಂದ 5 ದಿನಗಳ ಕಾಲ ಆನೆ ಗಣತಿ ನಡೆಯಲಿದ್ದು, ದೇಶದಲ್ಲಿ ಆನೆಗಳ ಸಂತತಿಯನ್ನು ನಿಖರವಾಗಿ ದಾಖಲಿಸಲು ನಡೆಸಲಾಗುತ್ತಿರುವ ಈ ಗಣತಿಯಲ್ಲಿ ಇಲಾಖೆ ಸಿಬ್ಬಂದಿ ಜತೆಗೆ ಸ್ವಯಂ ಸೇವಕರನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಅರಣ್ಯದಲ್ಲಿರುವ ಪ್ರಾಣಿಗಳಲ್ಲಿ ಅತೀ ಹೆಚ್ಚು ಅಪಾಯಕಾರಿಯಾಗಿರುವ ಆನೆಗಳ ಗಣತಿ ಕ್ಲಿಷ್ಟದಾಯಕವಾಗಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ತರಬೇತಿ ಇಲಾಖೆಯಿಂದ ದೊರೆಯಲಿದೆ.
2013 ರ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಆನೆಗಳ ಗಣತಿ ಇಡೀ ದೇಶದಲ್ಲಿ ಏಕಕಾಲಕ್ಕೆ ನಡೆಯುತ್ತಿದೆ. ಕರ್ನಾಟಕವೂ ಸೇರಿದಂತೆ ಆನೆಗಳು ಹೆಚ್ಚಾಗಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಕ್ರಿಯೆ 3 ದಿನಗಳವರೆಗೆ ನಡೆಯಲಿದೆ. ಮಡಿಕೇರಿ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಆನೆಗಳ ಗಣತಿ ಭರದಿಂದ ನಡೆಯಲಿದೆ.
22ರಿಂದ ಸುಮಾರು 35 ವರ್ಷದ ಯುವಕರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಪ್ರತಿ ಬಾರಿಯ ಆನೆ ಗಣತಿಯಲ್ಲಿ ಭಾಗವಹಿಸುವ ಸಾರ್ವಜನಿಕರು ಐದು ದಿನಗಳ ಆನೆಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಗಣತಿಗೆ ಬರುವವವರು ಆರೋಗ್ಯದಲ್ಲಿ ಸಧೃಡರಾಗಿರಬೇಕು. ಅಂತಹವರಿಗೆ ಹೆಚ್ಚು ಅವಕಾಶ ನೀಡುವುದಾಗಿ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಎ.16 ರಿಂದ 19ರವರೆಗೆ ಆನೆ ಗಣತಿಯಲ್ಲಿ ಭಾಗವಹಿಸುವ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಸುಮಾರು 500 ಚದರ ಕಿ.ಮೀ. ವ್ಯಾಪ್ತಿಯನ್ನು ಗಣತಿಗೆ ಆಯ್ದುಕೊಳ್ಳಲಿದ್ದು, 2013ರ ಗಣತಿಯಲ್ಲಿ ಕಂಡುಬಂದಿದ್ದ 200 ಆನೆಗಳಿಗಿಂತಲೂ ಹೆಚ್ಚು ಸಲಗಗಳು ಈ ಬಾರಿಯ ಗಣತಿಯಲ್ಲಿ ಪತ್ತೆಯಾಗಬಹುದೆಂಬ ನಿರೀಕ್ಷೆ ಹೊಂದಲಾಗಿದೆ. ನೇರ ಹಾಗೂ ಪರೋಕ್ಷ ವಿಧಾನಗಳಲ್ಲಿ ನಡೆಯುವ ಗಣತಿಯು ಭದ್ರಾ ಅಭಯಾರಣ್ಯದಲ್ಲಿ 20 ಬೀಟ್‌ಗಳಲ್ಲಿ ಪೂರ್ಣಗೊಳ್ಳಲಿದೆ. ಹೀಗೆ ಕ್ರೋಢೀಕರಿಸಲಾದ ಮಾಹಿತಿಯನ್ನು ಅಂತಿಮವಾಗಿ ಪ್ರಾಜೆಕ್ಟ್ ಎಲಿಫೆಂಟ್ ಕಂಟ್ರೋಲರ್ಗೆ ಒಪ್ಪಿಸಲಾಗುವುದು. ಹುಲಿ ಗಣತಿಯಲ್ಲಿ ತೊಡಗಿಕೊಂಡಿದ್ದ ಅನುಭವವನ್ನೇ ಬಹುಪಾಲು ಈ ಗಣತಿಯಲ್ಲೂ ಬಳಸಿಕೊಳ್ಳುವ ಚಿಂತನೆ ಇಲಾಖೆಯದು.
ಕೇಂದ್ರ ಸರ್ಕಾರದ ನಿರ್ದೇಶನದನ್ವಯ ನಡೆಯಲಿರುವ ಆನೆಗಣತಿ ಹುಲಿಗಣತಿಗಿಂತ ಸಂಪೂರ್ಣ ವಿಭಿನ್ನ ನೆಲೆಯಲ್ಲಿ ಪೂರ್ಣಗೊಳ್ಳಲಿದೆ. ಗಣತಿಯಲ್ಲಿ ಅತ್ಯುಪಯುಕ್ತ ಹಾಗೂ ಸಲಗ ಸಂಖ್ಯಾಬಲ ಹೆಚ್ಚಿಸುವಂತಹ ಆಶಾದಾಯಕ ಅಂಶಗಳು ಪತ್ತೆಯಾಗಬಹುದೆಂಬ ನಿರೀಕ್ಷೆ ಇಲಾಖೆಯದ್ದು. ಆನೆಗಳ ಸಂತತಿಯನ್ನು ನಿಖರಗೊಳಿಸಲು ಸಹಕಾರಿಯಾಗಿರುವಂಥ ಸೆನ್ಸಸ್ ಕಾರ್ಯಕ್ರಮಕ್ಕೆ ಉತ್ಸಾಹಿ ಸ್ವಯಂ ಸೇವಕರ ದಂಡೂ ಸಿದ್ಧಗೊಂಡಿದೆ.